stat Counter



Friday, September 24, 2010

S.U. PANIYADI (ಎಸ್.ಯು. ಪಣಿಯಾಡಿ)

07-kan-2010
ಎಸ್.ಯು. ಪಣಿಯಾಡಿಯವರ 'ಅಂತರಂಗ'
- ಮುರಳೀಧರ ಉಪಾಧ್ಯ ಹಿರಿಯಡಕ
ಎಸ್.ಯು. ಪಣಿಯಾಡಿ (ಶ್ರೀನಿವಾಸ ಉಪಾಧ್ಯಾಯ ಪಣಿಯಾಡಿ - 1897-1959)ಯವರ ಹಿರಿಯರು ಉಡುಪಿಯ ಅನಂತೇಶ್ವರ ದೇವಸ್ಥಾನದ ಅರ್ಚಕರಾಗಿದ್ದರು. ಪಣಿಯಾಡಿಯವರು ಸಂಸ್ಕೃತ ಅಧ್ಯಯನ ಮಾಡಿದ್ದು ಮೈಸೂರಿನಲ್ಲಿ. ಸಂಸ್ಕೃತ ಶಿರೋಮಣಿ ಪರೀಕ್ಷೆಯಲ್ಲಿ ಬಂಗಾರದ ಪದಕ. 1920ರಲ್ಲಿ ಗುಜರಾತಿನ ಬರೋಡಾದ ಪ್ರಸಿದ್ಧ ಗ್ರಂಥಾಲಯದಲ್ಲಿ ರೂ.200 ಸಂಬಳದ ಉದ್ಯೋಗ. 1923ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಉಡುಪಿಗೆ ಬಂದ ಪಣಿಯಾಡಿಯವರು ಸ್ವಾತಂತ್ರ್ಯ ಹೋರಾಟ, ತುಳು ಚಳುವಳಿ ಆರಂಭಿಸಿ 1923ರಿಂದ 1940ರ ವರೆಗೆ ಉಡುಪಿಯ ಸಾಂಸ್ಕೃತಿಕ ರಂಗದಲ್ಲಿ ಮೆರೆಯುತ್ತಿದ್ದರು.1930ರ ಉಪ್ಪಿನ ಸತ್ಯಾಗ್ರಹದಲ್ಲಿ ಬಂಧನಕ್ಕೊಳಗಾದ ಪಣಿಯಾಡಿಯವರು ನೆಲ್ಲೂರು ಜೈಲಿನಲ್ಲಿದ್ದರು. ಅವರು ಉಡುಪಿಯಲ್ಲಿ ದಲಿತಪರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಪಣಿಯಾಡಿಯವರ ಕನಸುಗಳೊಂದಿಗೆ 1928ರಲ್ಲಿ ತುಳುವ ಮಹಾಸಭೆ ಸ್ಥಾಪನೆಗೊಂಡಿತು. ಅವರ 'ತುಳುವ ಸಾಹಿತ್ಯಮಾಲೆ' 1929-1936ರ ಅವಧಿಯಲ್ಲಿ ಹನ್ನೊಂದು ಪುಸ್ತಕಗಳನ್ನು ಪ್ರಕಟಿಸಿತು. 'ತುಳು ವ್ಯಾಕರಣ' (1932), 'ಸತೀ ಕಮಲೆ' (1936-ಕಾದಂಬರಿ) ಪಣಿಯಾಡಿಯವರ ತುಳು ಕೃತಿಗಳು. ಪಣಿಯಾಡಿಯವರು ಉಡುಪಿಯಲ್ಲಿ 'ಭಾರತ ವಸ್ತುಮಂದಿರ' ಎಂಬ ಅಂಗಡಿ ನಡೆಸುತ್ತಿದ್ದರು. ಅವರು ತುಳುನಾಡು ಪ್ರೆಸ್ (1930), ಮಣಿಪಾಲ ಪ್ರೆಸ್ (1934) ತುಳುನಾಡು ಬ್ಯಾಂಕ್ (1933)ಗಳನ್ನು ಸ್ಥಾಪಿಸಿದರು. ತುಳುನಾಡು ಆರ್ಥಿಕ ಕಷ್ಟ-ನಷ್ಟ ಅನುಭವಿಸಿದ ಅವರು 1940ರಲ್ಲಿ ಉಡುಪಿ ಬಿಟ್ಟು ತಮಿಳುನಾಡಿನ ಮಧುರೈಗೆ ಹೋಗಿ ನೆಲೆಸಿದರು. 1950ರಿಂದ ಮದ್ರಾಸಿನಲ್ಲಿ ವಾಸಿಸುತ್ತಿದ್ದ ಪಣಿಯಾಡಿಯವರು 1959ರಲ್ಲಿ ನಿಧನರಾದರು.'ಅಂತರಂಗ' ಪಣಿಯಾಡಿಯವರು ಮಣಿಪಾಲದಿಂದ ಪ್ರಕಟಿಸುತ್ತಿದ್ದ ಕನ್ನಡ ವಾರಪತ್ರಿಕೆ. 1938ರಲ್ಲಿ ಆರಂಭಗೊಂಡ ಈ ಪತ್ರಿಕೆಯಿಂದಾಗಿ ಪಣಿಯಾಡಿಯವರ ಹೆಸರು ಕರ್ನಾಟಕದ ಎಲ್ಲ ಊರುಗಳಲ್ಲೂ ಜನಪ್ರಿಯವಾಯಿತು. ಕೆ. ಹೈದರ್, ಎಂ.ವಿ. ಹೆಗ್ಡೆ, ಪಾ.ವೆಂ. ಆಚಾರ್ಯ, ಎನ್.ಎಸ್. ಕಾರಂತ ಇವರೆಲ್ಲ 'ಅಂತರಂಗ'ದ ಸಂಪಾದಕ ಮಂಡಳಿಯಲ್ಲಿದ್ದರು. ಕೊರಡ್ಕಲ್ ಶ್ರೀನಿವಾಸರಾಯರು, ಪಾದೂರು ವಾಸುದೇವ ಉಪಾಧ್ಯರು ಈ ಪತ್ರಿಕೆಗಾಗಿ ದುಡಿದರು.ಬನ್ನಂಜೆ ರಾಮಾಚಾರ್ಯರು ಬರೆದಿರುವಂತೆ, ಪಣಿಯಾಡಿಯವರು 'ಅಂತರಂಗ' ವಾರಪತ್ರಿಕೆಯ ಮೂಲಕ ಕನ್ನಡ ಪತ್ರಿಕಾಲೋಕಕ್ಕೆ ನೀಡಿದ ಕೊಡುಗೆ ಅನನ್ಯವೂ, ಅಮೂಲ್ಯವೂ ಆಗಿದೆ....... 'ಅಂತರಂಗ' ವಾರಪತ್ರಿಕೆ ಆಗಿನ ಕಾಲದಲ್ಲಿ ಒಂದು ಕ್ರಾಂತಿಕಾರಿ ಪ್ರಯೋಗ. ಈಗಿನ 'ಸುಧಾ' 'ಕರ್ಮವೀರ' 'ತರಂಗ' ಆಕಾರದಲ್ಲಿ ಕೇವಲ ಒಂದಾಣೆ ಬೆಲೆಗೆ ಒದಗಿಸಲಾಗುತ್ತಿದ್ದ ಪತ್ರಿಕೆ ಬಹುಬೇಗನೆ ಕರ್ನಾಟಕದ ಜನರ ಮನಸ್ಸನ್ನು ಗೆದ್ದುಕೊಂಡಿತು. ಆಗ ಜನಪ್ರಿಯವಾಗಿದ್ದ 'ಪ್ರಜಾಮತ' (ಬೆಂಗಳೂರಿನ ವಾರಪತ್ರಿಕೆ)ದ ಸಂಪಾದಕರಾದ ಶ್ರೀ ಜಿ.ಎನ್. ಗುಪ್ತ ಅವರು 'ಅಂತರಂಗ'ದ ಜಯಭೇರಿಯನ್ನು ಕಂಡು 'ಇವನೆಲ್ಲಿಂದ ಬಂದ್ನಪ್ಪಾ? ಗ್ರಹಚಾರ' ಎಂದು ಗಾಬರಿಯಿಂದ ಉದ್ಗಾರವೆತ್ತಿದರಂತೆ....... 'ಅಂತರಂಗ' ಖಂಡಿತವಾಗಿಯೂ ಉಡುಪಿಯ ಪತ್ರಿಕೋದ್ಯಮಕ್ಕೆ ವೈಭವದ ಮೆರುಗನ್ನೂ, ಅದ್ವಿತೀಯ ಯಶಸ್ಸನ್ನೂ ತಂದುಕೊಟ್ಟಿತು. (ಮುರಳೀಧರ ಉಪಾಧ್ಯ [ಸಂ.]-1995). 'ಅಂತರಂಗ' ಲೇಖಕರಿಗೆ ಗೌರವಧನವನ್ನು ನೀಡುವುದನ್ನು ಆರಂಭಿಸಿತು. 'ಅಂತರಂಗ'ದಲ್ಲಿ ಪಣಿಯಾಡಿವಯರ ಗರಡಿಯಲ್ಲಿ ತರಬೇತಿ ಪಡೆದು ಮುಂದೆ ಪ್ರಸಿದ್ಧ ಲೇಖಕರಾದ ಪಾ.ವೆಂ. ಆಚಾರ್ಯರು ಬರೆದಿರುವಂತೆ, 'ಪಣಿಯಾಡಿಯವರು ಕ್ರಾಂತಿಕಾರಿಯಾಗಿದ್ದರು. ಅವರ ಸಂಸರ್ಗದಲ್ಲಿ ನನ್ನಲ್ಲಿದ್ದ ಅಳಿದುಳಿದ ಸಾಂಪ್ರದಾಯಿಕ ನಂಬಿಕೆಗಳು ಕೂಡ ಕಳಚಿಬಿದ್ದುವು.'1940ರಲ್ಲಿ ಪಣಿಯಾಡಿಯವರು ಉಡುಪಿ ಬಿಟ್ಟುಹೋದಾಗ 'ಅಂತರಂಗ'ದ ಆಡಳಿತ ಮಂಡಳಿ ಬದಲಾಯಿತು. ಆಡಳಿತ ಮಂಡಳಿಯ ಪರವಾಗಿ ಮಿಯಾಳ ನರಸಿಂಹಾಚಾರ್ ಅವರು ಸೆಪ್ಟಂಬರ್ 10, 1940ರ ಅಂತರಂಗದಲ್ಲಿ ಹೀಗೆ ಬರೆದರು - 'ಅಂತರಂಗ'ವನ್ನು ಎರಡು ವರ್ಷಗಳ ವರೆಗೆ ಜಯಶೀಲವಾಗಿ ನಡೆಸಿ, ಅದಕ್ಕೆ ಅಖಿಲ ಕರ್ನಾಟಕದಲ್ಲೊಂದು ಸ್ಥಾನವನ್ನು ಗಳಿಸಿದ ಪ್ರಶಂಸೆಯು ಅದರ ಸಂಚಾಲಕರಾದ ಶ್ರೀ ಎಸ್.ಯು. ಪಣಿಯಾಡಿಯವರಿಗೆ ಸಲ್ಲತಕ್ಕದ್ದು. ಎರಡೇ ವರ್ಷಗಳಲ್ಲಿ 'ಅಂತರಂಗ'ವು ಶಕ್ತಿಮೀರಿ ಕನ್ನಡಿಗರ ಸೇವೆಮಾಡಿ ಸರ್ವರ ಆದರಕ್ಕೆ ಪಾತ್ರವಾಗಿದೆ.'ನವಯುಗ' ಪತ್ರಿಕೆಯ ಕೆ. ಹೊನ್ನಯ್ಯ ಶೆಟ್ಟರು (1905-1974) 1945ರ ವರೆಗೆ 'ಅಂತರಂಗ'ವನ್ನು ಪ್ರಕಟಿಸುತ್ತದ್ದರು. ಅನಂತರ ಅವರು 'ಅಂತರಂಗ'ವನ್ನು ನಿಲ್ಲಿಸಿ 'ಅಂತರಂಗ'ದ ಹೆಸರಲ್ಲಿ ಒಂದು ಪುಸ್ತಕಮಾಲೆಯನ್ನು ಆರಂಭಿಸಿದರು.

ಹೆಚ್ಚಿನ ಓದಿಗಾಗಿ
1. ಎಸ್.ಯು. ಪಣಿಯಾಡಿ - ಮುರಳೀಧರ ಉಪಾಧ್ಯ ಹಿರಿಯಡಕ, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, 19972. ಎಸ್.ಯು. ಪಣಿಯಾಡಿ (ತುಳು) - ಮುರಳೀಧರ ಉಪಾಧ್ಯ ಹಿರಿಯಡಕ, ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ, 1996

No comments:

Post a Comment