stat Counter



Saturday, June 7, 2014

ಮುರಳೀಧರ ಉಪಾಧ್ಯ ಹಿರಿಯಡಕ - ಕಯ್ಯಾರರ ಕಾವ್ಯ

05 -KAN-10

2

ಕಯ್ಯಾರ ಕಿಞ್ಞಣ್ಣ ರೈಗಳ ಕಾವ್ಯ

ತುಳುನಾಡಿನ (ದಕ್ಷಿಣ ಕನ್ನಡ ಜಿಲ್ಲೆ) ಆಧುನಿಕ ಕನ್ನಡ ಕಾವ್ಯದ ಇತಿಹಾಸದಲ್ಲಿ ಬ್ರಾಹ್ಮಣೇತರ ಸಮಾಜದಿಂದ ಬಂದ ಮೊದಲ ಕವಿ - ಕಯ್ಯಾರ ಕಿಞ್ಞಣ್ಣ ರೈ. 'ನೀನು ನನ್ನ ಭಾವನೆಯಲಿ' ರೈಗಳ ಮೊದಲ ಕವನ. ಅದು ಮಂಗಳೂರಿನ 'ಸ್ವದೇಶಾಭಿಮಾನಿ'ಯಲ್ಲಿ ಅಚ್ಚಾದಾಗ ವಿದ್ಯಾರ್ಥಿಯಾಗಿದ್ದ ರೈಗಳಿಗೆ ಖುಷಿಯೋ ಖುಷಿ. "ಅಚ್ಚಾಗಿ ಬರುವಾಗ ಹುಚ್ಚಾಗಿ ಹೋಗಿಹೆನು ನೆಲವ ಬಿಟ್ಟೇರಿಹೆನು ಬಾನಿನೆಡಗು", 'ದುರ್ಗಾದಾಸ� ಎಂಬ ಕಾವ್ಯನಾಮದಲ್ಲಿ ಅವರ ಆರಂಭದ ಕವಿತೆಗಳು 'ಜಯಕರ್ನಾಟಕ� 'ರಾಷ್ಟ್ರಬಂಧು' 'ಸ್ವದೇಶಾಭಿಮಾನಿ' ಮತ್ತಿತರ ಪತ್ರಿಕೆಗಳಲ್ಲಿ ಅಚ್ಚಾದುವು. ಹಿರಿಯ ಕವಿಗಳು ಕಾವ್ಯರಚನೆಯ ಆರಂಭದ ದಿನಗಳಲ್ಲಿ ತನ್ನನ್ನು ಪ್ರೋತ್ಸಾಹಿಸಿದ ಎರಡು ಘಟನೆಗಳನ್ನು ರೈಗಳು ನೆನಪಿಸಿಕೊಳ್ಳುತ್ತಾರೆ. ಪುತ್ತೂರಿನಲ್ಲಿ ಶಿವರಾಮ ಕಾರಂತರು ಏರ್ಪಡಿಸುತ್ತಿದ್ದ ದಸರಾ ಸಾಹಿತ್ಯೋತ್ಸವದಲ್ಲಿ ಒಮ್ಮೆ ಬೇಂದ್ರೆ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿ ಕಿಞ್ಞಣ್ಣ ರೈಗಳು ಓದಿದ 'ಊರ್ಮಿಳಾ� ಕಥನಕವನವನ್ನು ಬೇಂದ್ರೆ ಮೆಚ್ಚಿ ಮಾತನಾಡಿದರು. ರೈಗಳು ಗೋವಿಂದ ಪೈಗಳನ್ನು ಮೊದಲ ಬಾರಿ ಭೇಟಿಯಾದಾಗ, ಪೈಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ರೈಗಳ ಕೆಲವು ಕವನಗಳನ್ನು ಹೆಸರಿಸಿ, 'ಅವುಗಳ ಕವಿ ನೀವಲ್ಲವೇ?' ಎಂದು ಮೆಚ್ಚಿಗೆ ಸೂಚಿಸಿದರು.

ಕಯ್ಯಾರ ಕಿಞ್ಞಣ್ಣ ರೈಗಳ ಮೊದಲ ಕವನ ಸಂಕಲನ 'ಶ್ರೀಮುಖ' ಉಡುಪಿಯ 'ಕಿರಿಯರ ಪ್ರಪಂಚ'ದಿಂದ 1943ರಲ್ಲಿ ಪ್ರಕಟವಾಯಿತು. ರೈಗಳು ತನ್ನ ಹದಿನೆಂಟು-ಇಪ್ಪತ್ತೆಂಟರ ನಡುವಿನ ಪ್ರಾಯದಲ್ಲಿ ಬರೆದ ಕವನಗಳು ಈ ಸಂಕಲನದಲ್ಲಿವೆ.
ಆರಂಭದಲ್ಲಿರುವ ಭವಭೂತಿಯ "ಯೇ ನಾಮ ಕೇಚದಿಹ ನ: ಪ್ರಥಯಂತ್ಯ ವಜ್ಞಾಂ ಜಾನಂತಿ ತೇ ಕಿಮಪಿ ತಾನ್ ಪ್ರತಿನೈಷಯತ್ನ: " (ಇಲ್ಲಿ ಕೆಲರಾರುಂಟೋ ನಮ್ಮನವಗಣಿಸುವರು ಬಲ್ಲರವರೇನೊ ಈ ಯತ್ನವವರಿಗಿಲ್ಲ) ಎಂಬ
 ಉದ್ಧರಣೆಯ ಹಿನ್ನೆಲೆಯಲ್ಲಿರುವುದು ಕವಿಯ ಆತ್ಮವಿಶ್ವಾಸ. 'ಶ್ರೀಮುಖ' ಸಂಕಲನದಲ್ಲಿ ಸ್ವಾನುಭವ, ಪ್ರಾದೇಶಿಕತೆ, ರಾಷ್ಟ್ರೀಯತೆ, ಅಂತಾರಾಷ್ಟ್ರೀಯತೆಗಳ ಮಿಶ್ರದನಿ ಇದೆ. 'ಆರ್ಯರೋ ಮೊಗಲರೋ ಕ್ರೈಸ್ತರೋ ತಡೆಯೇನು? ಎಲ್ಲರೂ ಬರಲೆಂದು ಸ್ವಾಗತಿಸಿದೆ' ಎಂದು ಆರಂಭವಾಗುವ 'ಶ್ರೀಮುಖ'ದಲ್ಲಿ ಕಯ್ಯಾರರ ಸೆಕ್ಯೂಲರ್ ಆಸಕ್ತಿಗಳು ಬೀಜರೂಪದಲ್ಲಿವೆ. ರಾಷ್ಟ್ರಮಾತೆಯನ್ನು ಕುರಿತ ಇಲ್ಲಿನ ಸ್ತುತಿಯಲ್ಲಿ ಇತಿಹಾಸದ ವೈಭವೀಕರಣವಾಗಲಿ, ಇತಿಹಾಸದ ಬಗ್ಗೆ ಪೂರ್ವಗ್ರಹವಾಗಲಿ ಇಲ್ಲ. ಗಾಂಧೀಜಿಯನ್ನು ಕುರಿತ ಕವಿಯ ಆರಾಧನಾಭಾವ ಮತ್ತು ವಿಶ್ವಾಸಗಳು ಈ ಸಂಕಲನದ ಎರಡು ಕವನಗಳಲ್ಲಿ ವ್ಯಕ್ತವಾಗುತ್ತವೆ. "ಕನ್ನಡಾಂತರ್ಗತಂ ತುಳುನಾಡು ನನ್ನದಿದು ಭಾರತಾಂತರ್ಗತಂ ಕನ್ನಡದ ಬದುಕು" ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಗಳ ನಡುವೆ ಸಂಘರ್ಷವಿಲ್ಲದ ಭಾರತದ ಒಕ್ಕೂಟ ಸ್ವರೂಪವನ್ನು ಕುರಿತ ಸರಿಯಾದ ಗ್ರಹಿಕೆ. 'ವಿಶ್ವಗರ್ಭದ ಗೋಳು' 'ಚಿನ್ನ ಕನಸು ಕಂಡೆನೊಂದು' ಕವನಗಳಲ್ಲಿ ಮಹಾಯುದ್ಧದ ಕಾಲದ ಅಂತಾರಾಷ್ಟ್ರೀಯ ಚಿಂತನೆ ಕನಸುಗಳಿವೆ. �ಊರ್ಮಿಳಾ ಮತ್ತು ಕರ್ಣನನ್ನು ಕುರಿತ 'ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡು' ಕಥನ ಕವನಗಳಲ್ಲಿ ಠಾಗೋರ್ ಮತ್ತು ಪಂಪನಿಗಿಂತ ಭಿನ್ನವಾದ ದೃಷ್ಟಿಕೋನವಾಗಲೀ, ಒಳನೋಟವಾಗಲೀ ಇಲ್ಲ. 'ವಿಶ್ವ ಕರ್ನಾಟಕ� 'ಶ್ರೀಮುಖ'ವನ್ನು ಸಮೀಕ್ಷಿಸಿದ ತ.ರಾ.ಸು. ರೈಗಳ 'ಸ್ವಗತ'ವನ್ನು 'ಅತ್ಯುತ್ತಮ ಕವಿತೆ' ಎಂದು ಮೆಚ್ಚಿಕೊಂಡರು.

1949ರಲ್ಲಿ ಪ್ರಕಟವಾದ ಕಯ್ಯಾರರ 'ಐಕ್ಯಗಾನ'ಕ್ಕೆ ಐತಿಹಾಸಿಕ ಮಹತ್ವವಿದೆ. ರಾಷ್ಟ್ರೀಯತೆ, ಗಾಂಧೀವಾದ, ಧರ್ಮನಿರಪೇಕ್ಷತೆ, ರಾಷ್ಟ್ರವಿಭಜನೆಯನ್ನು ಕುರಿತ ಸಂಕಟ - ಇಲ್ಲಿನ ಪ್ರಧಾನ ಆಶಯಗಳು. ರೈಗಳ 'ಐಕ್ಯಗಾನ' 'ಕಹಳೆ ಮೊಳಗುತಿದೆ' ಸ್ವಾತಂತ್ರ ಸಂಗ್ರಾಮದ ಗೇಯಗೀತೆಗಳಾಗಿ ಜನಪ್ರಿಯವಾಗಿದ್ದುವು. 'ಐಕ್ಯಗಾನ'ದ ಮುನ್ನುಡಿಯಲ್ಲಿ ಕವಿ ತಾಯ್ನಾಡಿನ ಬಿಡುಗಡೆಯ ಹೋರಾಟದಲ್ಲಿ ಜನತೆ ಮಾಡಿದ ಬಲಿದಾನಗಳು, ಬಿಡುಗಡೆಯ ಬೆಲೆಗಳು, ಸ್ವಾತಂತ್ರ್ಯದ ಸಂಕಟ, ಸಂತೋಷಗಳು ಇಲ್ಲಿನ ಕವನಗಳ ಪ್ರೇರಕಗಳು. ರಾಷ್ಟ್ರದ ದಾಸ್ಯ ವಿಮೋಚನೆ, ಅದರೊಂದಿಗಾದ ವಿಭಜನೆ, ವಿಭಜನೆಯಿಂದಾದ ಮಾರಣ, ಅದಕ್ಕೆ ಕಾರಣವಾದ ಜಾತೀಯತೆ, ಜಾತೀಯತೆಯಿಂದುಂಟಾದ ಅನೈಕ್ಯ, ಅನೈಕ್ಯವು ತಂದ ನೋವನ್ನು ನೀಗಾಡಿಸಲು ನಮ್ಮಲ್ಲಿರಬೇಕಾದ ದೃಷ್ಟಿ ಹೃದಯಗಳ ವೈಶಾಲ್ಯ - ಇವು ಇದರಲ್ಲಿರುವ ಪಾಡು ಹಾಡುಗಳು ಎನ್ನುತ್ತಾರೆ.

ರಾಷ್ಟ್ರೀಯತೆ ದುರಭಿಮಾನವಾಗಬಾರದೆಂಬ ಎಚ್ಚರ, ಜಾಗತಿಕ ಶಾಂತಿಯ ಕನಸು ಕಾಣುವ ಪ್ರಬುದ್ಧ ರಾಜಕೀಯ ನಿಲುವು ಕಿಞ್ಞಣ್ಣ ರೈಗಳಲ್ಲಿದೆ - ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಲದಲ್ಲಿ ನಮ್ಮ ದೃಷ್ಟಿ ರಾಷ್ಟ್ರೀಯ ಆವರಣದೊಳಗೆ ಸುಳಿಯುತ್ತಿದ್ದರೆ ಅದು ಕ್ಷಮ್ಯ; ಆದರೆ ವಿಶಾಲ ಜಗತ್ತಿನ ಕಡೆಗೆ ನಮ್ಮ ಭಾವನೆ ಹರಿದು ಮಾನವಕೋಟಿಯ ಕಲ್ಯಾಣ ಕೈಗೂಡಬೇಕೆಂಬ ಆಕಾಂಕ್ಷೆ ಹಲವರಲ್ಲಿ ಒಡಮೂಡಿದೆ; ಭಾರತವೇ ಈ ಹಾದಿಯಲ್ಲಿ ಜಗತ್ತಿಗೆ ಮಾರ್ಗದರ್ಶಕವಾಗಬೇಕು; ಇದೇ ನಮ್ಮ ಕಲಾವಿದರ ಆದರ್ಶವೂ ಆಗಿರಬೇಕು.

ಹನ್ನೆರಡು ವರ್ಷಗಳ ಅನಂತರ 1961ರಲ್ಲಿ ರೈಗಳ ಮೂರನೆಯ ಕವನ ಸಂಕಲನ 'ಪುನರ್ನವ' ಪ್ರಕಟವಾಯಿತು. ಅದರೊಂದಿಗೆ ನನ್ನ ಬಾಳುವೆಯಲ್ಲಿ ಮತ್ತು ನಾನು ಬಾಳಿಬಂದ ನೆಲದಲ್ಲಿ ಉಂಟಾದ ಕೆಲವು ಆಘಾತಗಳ ದೆಸೆಯಿಂದ ಈ ವಿಳಂಬ ಅನಿವಾರ್ಯವೇ ಆಯಿತು ಎಂದಿದ್ದಾರೆ ರೈಗಳು. ಬಾಳಿಬಂದ ನೆಲೆದಲ್ಲಿ ಉಂಟಾದ ಆಘಾತ - ಕಾಸರಗೋಡು ಕೇರಳಕ್ಕೆ ಸೇರಿದ್ದು. ಈ ಸಂಕಲನದ 'ಬೆಂಕಿ ಬಿದ್ದಿದೆ ಮನೆಗೆ' ಸಾಹಿತ್ಯೇತರ ಕಾರಣಗಳಿಗಾಗಿ ಜನಪ್ರಿಯವಾದ ಕವನ. ರೈಗಳ ರಾಜಕೀಯ ಚಿಂತನೆಯ ದೃಷ್ಟಿಯಿಂದ 'ರಾಷ್ಟ್ರನಟ' ಗಮನಾರ್ಹ. 'ಪುನರ್ನವ' - 'ಶ್ರೀಮುಖ' ಮತ್ತು 'ಸ್ವಗತ'ಗಳ ಮುಂದುವರಿದ ಭಾಗದಂತಿದೆ. 'ನಚಿಕೇತ'ನ ಕತೆ ವಸ್ತುವಾಗಿರುವ 'ಚಿರಪ್ರಶ್ನೆ' ಉಪನಿಷತ್ತುಗಳನ್ನು ಕುರಿತ ರೈಗಳ ಒಲವನ್ನು ಸೂಚಿಸುತ್ತದೆ. 'ಪುನರ್ನವ'ದ ಬಗ್ಗೆ ಗೋವಿಂದ ಪೈಗಳು ಪಾರಿವಾಳದ ಹಿಂಡಿನಂತೆ ರೂಪದಲ್ಲಿ ಮಾತ್ರ ಸಾಹಜಿಕವಾಗಿ ಭಿನ್ನವೇ ಹೊರತು, ಧ್ವನಿಯಲ್ಲಿ ಏಕಪ್ರಕಾರವಾದ ಕಲಕಂಠ ಎಂದು ಅಭಿಪ್ರಾಯಪಟ್ಟರು. 'ಪುನರ್ನವ' 1963ರಲ್ಲಿ ಮೈಸೂರು ಸರಕಾರದ ಪ್ರಶಸ್ತಿ ಪಡೆಯಿತು.

1970ರಲ್ಲಿ ಪ್ರಕಟವಾದ 'ಚೇತನ'ದ ಮುಖ್ಯ ಕವನಗಳು 'ಭಾಗವತ' 'ಅಭಿನ್ನ' ಮತ್ತು 'ಹೇ ರಾಮ'. ಈ ಸಂಕಲನದಲ್ಲಿ ರೈಗಳ ಸೃಜನಶೀಲತೆ ಆರೋಹಣ ಗತಿಯಲ್ಲಿ ಸಾಗದೆ, ಸ್ಥಗಿತಗೊಂಡಿದೆಯೇ ಎಂದು ವಿಮರ್ಶಕರಲ್ಲಿ ಗುಮಾನಿ ಹುಟ್ಟಿಸಿತು. ಈ ರೀತಿಯ ಚೇತನ, 'ಸ್ಫೂರ್ತಿ, ದಿವ್ಯಾನುಭವ ಈ ಸಂಗ್ರಹದಲ್ಲಿ ಕಾಣಿಸುವುದಿಲ್ಲ' ಎಂದು ಸುಮತೀಂದ್ರ ನಾಡಿಗರು ಬರೆದರು.

'ಕೊರಗ' (1981) ರೈಗಳ ಸೃಜನಶೀಲತೆ ನಿಂತ ನೀರಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ ಸಂಕಲನ. ರೈಗಳ ಜನಪರ ನಿಲುವುಗಳು, ಚಿಂತನಶೀಲತೆ, ಗತಿಶೀಲವಾದ ರಾಜಕೀಯ ಚಿಂತನೆಗಳು ಈ ಸಂಕಲನದಲ್ಲಿ ಅಭಿವ್ಯಕ್ತಗೊಂಡಿವೆ. 'ಕೊರಗ' 'ಅತಿಥಿ' 'ಕಾಲಾತೀತ' ಈ ಸಂಕಲನದ ಮುಖ್ಯ ಕವನಗಳು.

ಮೊದಲ ಸಂಕಲನದ ಅನಂತರದ ತನ್ನ ಎಲ್ಲ ಸಂಕಲನಗಳನ್ನು ರೈಗಳೆ ಸ್ವತಃ ಪ್ರಕಟಿಸಿದ್ದಾರೆ. ಅವರ ಸಂಕಲನಗಳಿಗೆ ಯಾರ ಮುನ್ನುಡಿಗಳೂ ಇಲ್ಲ ಎಂಬುದನ್ನು ಗಮನಿಸಬೇಕು. 'ಶ್ರೀಮುಖ' 'ಪುನರ್ನವ' 'ಚೇತನ'ಗಳು ಮದ್ರಾಸು, ಕೇರಳ, ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಪುಸ್ತಕಗಳಾಗಿದ್ದುವು. ಇದರಿಂದಾಗಿ ರೈಗಳ ಕೃತಿಗಳಿಗೆ ಪ್ರಚಾರ ಸಿಕ್ಕಿತು. ಸಮಕಾಲೀನ ಸಮಾಜ ರೈಗಳ ಕೃತಿಗಳನ್ನು ಅಲಕ್ಷಿಸಿಲ್ಲ ಎಂಬುದನ್ನೂ ಇದು ಸೂಚಿಸುತ್ತದೆ.

'ಶತಮಾನದ ಗಾನ' (1986) ರೈಗಳ ನೂರಹನ್ನೊಂದು ಆಯ್ದ ಕವನಗಳ ಸಂಕಲನ. ಈ ಸಂಕಲನದಲ್ಲಿ ವೆಂಕಟರಾಜ ಪುಣಿಂಚತ್ತಾಯರು ಬರೆದಿರುವ 'ಶತಮಾನದ ಗಾನ ಸಮೀಕ್ಷೆ' ಇದೆ.

3

ಕಯ್ಯಾರ ಕಿಞ್ಞಣ್ಣ ರೈಗಳ 'ಐಕ್ಯಗಾನ'ಕ್ಕೆ ಪ್ರೇರಣೆ ನೀಡಿರುವ ಗಾಂಧೀಜಿಯ ಮತ್ತು ಅವರ ಮಾರ್ಗದರ್ಶನದಲ್ಲಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಕೆಲವು ಮುಖ್ಯ ಧೋರಣೆಗಳನ್ನು ಗಮನಿಸಬೇಕು. ಪ್ರೊ|ಬಿಪಿನ್‍ಚಂದ್ರ ಮತ್ತಿತರ ಇತಿಹಾಸಕಾರರ ಇತ್ತೀಚೆಗಿನ ಗ್ರಂಥವೊಂದರಲ್ಲಿ ಇದರ ವಿಸ್ತೃತ ಚರ್ಚೆಯಿದೆ. ವಸಾಹತುಶಾಹಿಯ ಅಧಿಕಾರಿಗಳ ನಿಶಸ್ತ್ರೀಕರಣ ಇತ್ಯಾದಿ ತಂತ್ರಗಳಿಂದ ರಾಜಕೀಯವಾಗಿ ನಿಷ್ಕ್ರಿಯವಾಗಿದ್ದ ಜನಸಾಮಾನ್ಯರನ್ನು ಸಕ್ರಿಯ ರಾಜಕಾರಣಕ್ಕೆ ತರುವುದು ಗಾಂಧೀಶಕದ ಚಳವಳಿಗಾರರ ಒಂದು ಪ್ರಮುಖ ಧ್ಯೇಯವಾಗಿತ್ತು. "ಜನತೆ ಯಾವಾಗ ಸ್ವರಾಜ್ಯವನ್ನು ಪಡೆಯುವ ಸಾಮರ್ಥ್ಯ ಗಳಿಸುತ್ತಾರೋ, ಆಗ ಸುಮ್ಮನೆ ಕೇಳಿದರೆ ಸಾಕು ಸ್ವರಾಜ್ಯ ದೊರೆಯುತ್ತದೆ" ಎಂದು ಗಾಂಧೀಜಿ ಪದೇ ಪದೇ ಹೇಳುತ್ತಿದ್ದರು. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ವಸಾಹತುಶಾಹಿ ಆಡಳಿತಗಾರರ ಸೈದ್ಧಾಂತಿಕ ಪ್ರಭಾವವನ್ನು ಅಳಿಸಿಹಾಕುವುದು ರಾಷ್ಟ್ರೀಯವಾದಿ ತಂತ್ರದ ಎರಡನೆಯ ಧ್ಯೇಯವಾಗಿತ್ತು. (ಬೇಂದ್ರೆಯವರ ಮಿತ್ರ ಮತ್ತು 'ಗೆಳೆಯರ ಗುಂಪಿ'ನ ಸದಸ್ಯರಾಗಿದ್ದ 'ಸೀತಾತನಯ' ಕಾವ್ಯನಾಮದ ಶ್ರೀಧರ ಖಾನೋಲ್ಕರ್ ಬರೆದ 'ದೇಶೀ ದುಮದುಮ್ಮೆ' ಎಂಬ ಸುದೀರ್ಘ ಲಾವಣಿ ವಸಾಹತುಶಾಹಿಯ ಆರ್ಥಿಕ ಶೋಷಣೆಯ ತಂತ್ರಗಳನ್ನು, ಜನಸಾಮಾನ್ಯರ ನಿಷ್ಕ್ರಿಯತೆಯನ್ನು 'ಕಳೆಯಿಂದ ತುಂಬಿದ ಬೆಳದಿಂಗಳನು ಸೂಸಿ ಸುರಿವಂಥ ಹುಣ್ಣಿಮೆ ಚಂದ್ರಾಮ ಬಂದ' ಎಂದು ಗಾಂಧೀಜಿಯ ಆಗಮನವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸುತ್ತದೆ.) ನೆಹರೂ ತನ್ನ 'ಡಿಸ್ಕವರಿ ಆಫ್ ಇಂಡಿಯಾ'ದಲ್ಲಿ ಹೇಳಿದಂತೆ, ಗಾಂಧೀಜಿಯ ಬೋಧನೆಯ ಅಂತ:ಸತ್ವ-ಅಭಯ, ಬ್ರಿಟಿಷ್ ಆಡಳಿತ ಭಾರತದಲ್ಲಿದ್ದ ಪ್ರಧಾನವಾದ ಮನಸ್ಸಿನ ಆವೇಗ-ಭಯ. ವ್ಯಾಪಕವಾಗಿದ್ದ, ಗೋಳುಗೊಳಿಸುವ ಹಿಸುಕಿ ಕೊಲ್ಲುವ ಭಯ, ಸೈನ್ಯ, ಪೋಲಿಸ್, ಎಲ್ಲೆಡೆ ಹರಡಿದ್ದ ಗುಪ್ತಚರ ಜಾಲದ ಭಯ, ಅಧಿಕಾರಿಗಳ ಭಯ, ಜನರ ದಮನಕ್ಕಾಗಿ ಇದ್ದ ಕಾನೂನುಗಳು ಮತ್ತು ಜೈಲಿನ ಭಯ, ಸಾಲಗಾರರ ಭಯ, ಯಾವಾಗಲೂ ಮುಖ್ಯವಾಗಿದ್ದ ನಿರುದ್ಯೋಗ ಮತ್ತು ಹಸಿವಿನ ಭಯ, ವ್ಯಾಪಕವಾಗಿದ್ದ ಈ ಭಯದ ವಿರುದ್ಧ ಗಾಂಧೀಜಿ ತನ್ನ ಶಾಂತ ದೃಢ ಸ್ವರದಲ್ಲಿ ಘೋಷಿಸಿದರು - "ಭಯ ಪಡಬೇಡಿ".

ಸಮಾಜವಾದ ಕಾಂಗ್ರೆಸ್ಸಿನ ಅಧಿಕೃತ ಘೋಷಣೆಯಾಗದಿದ್ದರೂ ರಾಷ್ಟ್ರೀಯ ಚಳವಳಿ ಜನರ ಪರವಾಗಿತ್ತು. ವಸಾಹತುಶಾಹಿಯ ವಿರುದ್ಧದ ಹೋರಾಟಕ್ಕೆ ಪ್ರಥಮ ಪ್ರಾಶಸ್ತ್ಯವಿತ್ತು. ನಿಶ್ಯಸ್ತ್ರರಾದ ಜನರು ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಗಾಂಧೀಜಿ ಯೋಜಿಸಿದ ಅಹಿಂಸಾತ್ಮಕ ಹೋರಾಟದ ತಂತ್ರದಿಂದಾಗಿ ಮಹಿಳೆಯರ ಸಹಿತ ಲಕ್ಷಗಟ್ಟಲೆ ಜನಸಾಮಾನ್ಯರು ಚಳವಳಿಯಲ್ಲಿ ಭಾಗವಹಿಸಿದ್ದರು. ಜಾತೀಯತೆಯ ನಾಶ ಮತ್ತು ವರ್ಗಸಂಘರ್ಷಕ್ಕೆ ಚಳುವಳಿ ದ್ವಿತೀಯ ಪ್ರಾಶಸ್ತ್ಯ ನೀಡಿತು. ವಿದೇಶಿ ವಸ್ತ್ರಗಳ ಬಹಿಷ್ಕಾರ, ಖಾದಿ ಪ್ರಚಾರ, ದಲಿತರ ಉದ್ಧಾರ, ಇತರ ಮುಖ್ಯ ಕಾರ್ಯಕ್ರಮಗಳಿಗಾಗಿದ್ದುವು. ಕೋಮುವಾದಕ್ಕೆ ಎದುರಾಗಿ ಧರ್ಮನಿರಪೇಕ್ಷತೆಯ ತಾತ್ವಿಕತೆಯನ್ನು ದೃಢವಾಗಿ ಮಂಡಿಸಲಾಯಿತು. ಇದರಿಂದಾಗಿಯೇ 1947ರ ರಾಷ್ಟ್ರ ವಿಭಜನೆಯ ಅನಂತರವೂ ಭಾರತ ಒಂದು ಸೆಕ್ಯುಲರ್ ರಾಷ್ಟ್ರವಾಗಿ ಉಳಿಯಲು ಸಾಧ್ಯವಾದದ್ದು. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮಂಡನೆಗೆ ಅವಕಾಶ ಇತ್ಯಾದಿ ಪ್ರಜಾಪ್ರಭುತ್ವದ ಉನ್ನತ ಆದರ್ಶಗಳಿಗೆ ಪೋಷಣೆ ದೊರಕಿತ್ತು.

ಗಾಂಧೀವಾದಿ ಕಯ್ಯಾರರು ನೇತಾಜಿ ಸುಭಾಸ್‍ಚಂದ್ರ ಬೋಸರ 'ಆಜಾದ್ ಹಿಂದ್ ಫೌಜ್'ನ ಕುರಿತು 'ದಿಗಂತದಾಚೆಗೆ' ಎಂಬ ಸ್ತುತಿಕವನ ಬರೆಯುವುದು ಹೇಗೆ ಸಾಧ್ಯವಾಯಿತು? ಗಾಂಧೀಜಿ ಸುಭಾಸ್‍ಚಂದ್ರ ಬೋಸರ ನಡುವೆ ತೀವ್ರ  ಭಿನ್ನಾಭಿಪ್ರಾಯಗಳಿದ್ದರೂ ಸುಭಾಸರಿಗೆ ಗಾಂಧೀಜಿಯ ಬಗ್ಗೆ ಅಪಾರ ಗೌರವವಿತ್ತು: ಗಾಂಧೀಜಿಗಿರುವ ಜನ ಬೆಂಬಲದ ಅರಿವಿತ್ತು. ನಾನು ದೇಶಕ್ಕೆ ಕರೆಕೊಟ್ಟರೆ ಸುಮಾರು 20 ಲಕ್ಷ ಜನ ಓಗೊಟ್ಟಾರು. ಆದರೆ ಈ ಮುದುಕನಿಂದ 'ಕ್ವಿಟ್ ಇಂಡಿಯಾ' ಎಂಬ ಎರಡು ಶಬ್ದಗಳನ್ನು ಹೇಳಿಸುವುದು ನನಗೆ ಸಾಧ್ಯವಾದರೆ 20 ಕೋಟಿ ಜನ ಬೆಂಬಲಿಸುತ್ತಾರೆ. ಬ್ರಿಟಿಷ್ ರಾಜ್ಯವನ್ನು ನಾಶಮಾಡುವ ರಾಜಕೀಯ ಭೂಕಂಪವೇ ಉಂಟಾಗುತ್ತದೆ ಎಂದು ಸುಭಾಸ್‍ಚಂದ್ರ ಬೋಸ್ ಹೇಳಿದ್ದರು. ಐ.ಎನ್.ಎ.ಯ ವಿಭಾಗಗಳಿಗೆ ಗಾಂಧೀ ಬ್ರಿಗೇಡ್, ಆಜಾದ್ ಬ್ರಿಗೇಡ್ ಎಂದು ಹೆಸರಿಡಲಾಗಿತ್ತು. ಏಪ್ರಿಲ್ 14, 1944ರಂದು ಸುಭಾಸರು ಇಂಫಾಲಿನಲ್ಲಿ ಅರಳಿಸಿದ್ದು ಕಾಂಗ್ರೆಸ್ ಧ್ವಜವನ್ನು. ಜುಲೈ 6, 1944ರಂದು 'ಆಜಾದ್ ಹಿಂದ್ ರೇಡಿಯೋ'ದ ಪ್ರಸಾರ ಭಾಷಣದಲ್ಲಿ ಸುಭಾಸರು 'ರಾಷ್ಟ್ರಪಿತ' ಗಾಂಧೀಜಿಯ ಆಶೀರ್ವಾದ ಬೇಡಿದರು. ಈ ಹಿನ್ನೆಲೆಯಲ್ಲಿ ಕಯ್ಯಾರರಿಗೆ ಸ್ವಾತಂತ್ರ್ಯ 'ಗಾಂಧೀಜಿ ಒಳಗಿದ್ದು, ನೇತಾಜಿ ಹೊರಗಿದ್ದು' ತಂದದ್ದು ಎನಿಸುತ್ತದೆ.

1940ರ ದಶಕದಲ್ಲಿ ಕರ್ನಾಟಕದಲ್ಲಿ ಪ್ರಗತಿಶೀಲರ ಚಳವಳಿ ಆರಂಭವಾಗಿತ್ತು. 'ಗಾಂಧೀಜಿ ನಮ್ಮ ನಾಯಕ, ಲೆನಿನ್ ನಮ್ಮ ಗುರು' ಎಂದು ಘೋಷಿಸಿದ ಚಳವಳಿಯ ನಾಯಕರಲ್ಲಿ ಸೈದ್ಧಾಂತಿಕ ಗೊಂದಲಗಳಿದ್ದರೂ ಅದು ಸಾಕಷ್ಟು ಪ್ರಚಾರ ಪಡೆದಿತ್ತು, ಸಂವಾದ ಆರಂಭಿಸಿತ್ತು. ರೈಗಳು ಪ್ರಗತಿಶೀಲ ಚಳವಳಿಯಲ್ಲಿ ವಿಶೇಷ ಆಸಕ್ತಿ ವಹಿಸದಿರಲು ರಾಜಕೀಯ ಕಾರಣಗಳಿದ್ದುವು. ಅವರು ಹೇಳುವಂತೆ ದ್ವಿತೀಯ ಮಹಾಯುದ್ಧದ ಪ್ರಾರಂಭದ ಕಾಲದಲ್ಲಿದ್ದ ಜರ್ಮನ್-ರಶ್ಯನ್ ಮೈತ್ರಿ ಮುರಿದು, ರಶ್ಯಾ-ಬ್ರಿಟನ್ ಮೈತ್ರಿ ಹೊಸೆದಾಗ, ಕಮ್ಯುನಿಸ್ಟ್ ಪಕ್ಷದ ಅಂಧಾನುಕರಣೆಯ ನಮ್ಮ ಪ್ರಗತಿಶೀಲರಿಗೆ, ಗಾಂಧೀಜಿ-ನೆಹ್ರೂ ಫ್ಯಾಸಿಸ್ಟರೆನಿಸಿದರು. ಅದುವರೆಗೆ ಸಾಮ್ರಾಜ್ಯಶಾಹಿ ಸಮರವೆನಿಸಿದ್ದ ಬ್ರಿಟನಿನ ಯುದ್ಧ ಜನತಾ ಯುದ್ಧವಾಯಿತು. ಈ ಅನಿರೀಕ್ಷಿತ ಪರಿವರ್ತನೆಗೆ ಒಪ್ಪದವರು, 'ಕ್ವಿಟ್ ಇಂಡಿಯಾ ಚಳವಳಿ' ಸ್ವಾತಂತ್ರ್ಯ ಸಂಗ್ರಾಮವೆಂದು ಮನ:ಪೂರ್ವಕವಾಗಿ ನಂಬಿದವರು, ಗಾಂಧೀಜಿ, ನೆಹ್ರೂ, ಸುಭಾಸ್ ಎಲ್ಲರೂ ಉಜ್ವಲ ರಾಷ್ಟ್ರಪ್ರೇಮಿಗಳಾದ ನಾಯಕರೆಂದು ಅಭಿಮಾನಗೊಂಡವರು, ಕಮ್ಯುನಿಸ್ಟ್ ಪ್ರಗತಿಶೀಲರ ಕೈಯಲ್ಲಿ ಅಪ್ರಾಗತಿಕರಾದರು. ಇದರಿಂದಾಗಿ ಪ್ರಗತಿಶೀಲ ಚಳವಳಿ ಸಾಧಿಸಬೇಕಾದ ಸಿದ್ಧಿಯ ಕಡೆಗೆ ಹೋಗದೆ ಜನತೆಯ ಬೆಂಬಲ ಕಳಕೊಂಡಾಯಿತು.

ಆಧುನಿಕ ಕನ್ನಡ ಕಾವ್ಯದ ರಾಷ್ಟ್ರೀಯಧಾರೆ ಮೂಲತ: ತಿಲಕ್ ಸಂವೇದನೆಯ ಚೌಕಟ್ಟಿನಲ್ಲೇ ಇದ್ದು, ಆ ಪರಿಭಾಷೆಯಲ್ಲೇ ಅದು ಗಾಂಧಿಯನ್ ರಾಜಕಾರಣವನ್ನು ಅರ್ಥೈಸಿಕೊಂಡಿತು. ಉತ್ಸಾಹ, ವೀರಾವೇಶ, ಸಮಾಜದಲ್ಲಿರುವ ಸಂಶಯ, ಒಡಕುಗಳನ್ನು ಗಮನಿಸಿಯೂ ಅದನ್ನು ಮೀರುವ ತಿಲಕ್‍ವಾದಿ ಪರಂಪರೆಯ ಮುಂದುವರಿದ ಪರಿಕಲ್ಪನೆಯಾದ ಹಿಂದೂ ರಾಷ್ಟ್ರೀಯವಾದಿಗಳ ನಾಡು ಕಯ್ಯಾರರ ಆದರ್ಶವಲ್ಲ. ಅವರ ಆಯ್ಕೆ ಗಾಂಧೀಜಿಯ ಕನಸಿನ 'ಈಶ್ವರ ಅಲ್ಲಾ ತೇರೇ ನಾಮ್' ಎನ್ನುವ ಧರ್ಮನಿರಪೇಕ್ಷ ಭಾರತ.

ಕಯ್ಯಾರರ 'ಐಕ್ಯಗಾನ'ದಲ್ಲಿರುವುದು ರಾಷ್ಟ್ರವಿಭಜನೆಯನ್ನು ಕುರಿತ ವಿಷಾದ. 'ಐಕ್ಯಗಾನ' 'ಕೋಮುವಾದ'ಕ್ಕೆ ಪ್ರತಿಕ್ರಿಯೆಯಾಗಿ ಬಂತು. 1947ರಲ್ಲಿ ರಾಷ್ಟ್ರ ವಿಭಜನೆಯಾಗಿ ಕೋಮುವಾದ ಗೆದ್ದಿತು. ಮಹಾಭಾರತ ಯುದ್ಧವನ್ನು ಕಂಡ ವೇದವ್ಯಾಸರು ಒಂಟಿಯಾದಂತೆ ಗಾಂಧೀಜಿಯೂ ಒಂಟಿಯಾದರು. ಸುಮಾರು ಐದು ಲಕ್ಷ ಜನರ ಕೊಲೆಯಾಯಿತು. ವಿಭಜನೆ ಹಿಂದೂ-ಮುಸ್ಲಿಂ ಸಮಸ್ಯೆಗೆ ಅಂತಿಮ ಪರಿಹಾರವೇನೂ ಆಗಿರಲಿಲ್ಲ. ಆದ್ದರಿಂದ ಸ್ವತಂತ್ರ ಸೆಕ್ಯುಲರ್ ಭಾರತದಲ್ಲಿ ಐಕ್ಯಗಾನ ಐತಿಹಾಸಿಕ ಆವಶ್ಯಕತೆಯಾಗಿತ್ತು. ಯುದ್ಧ ಮುಗಿದರೂ, ಅಶ್ವತ್ಥಾಮ ತತ್ವ ಚಿರಂಜೀವಿಯಲ್ಲವೆ? 'ಐಕ್ಯಗಾನ'ದ ಕವಿಯ ತಾತ್ವಿಕತೆ ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ಪ್ರಗತಿಪರವಾದುದು. 'ಎನ್ನ ಜಾತಿ ಮನುಷ್ಯ ಜಾತಿ' ಎನ್ನುವ ಕವಿ ಕನಸುಣಿಯಲ್ಲ. ವರ್ಗವೈವಿಧ್ಯ, ಜಾತಿ ರಾಜಕೀಯ ಇವುಗಳ ಅರಿವು ಕವಿಯಲ್ಲಿದೆ - �ಧನಿಕರೊಂದೇ ಜಾತಿ, ಬಡವರೊಂದೇ ಜಾತಿ'; 'ಸ್ವಾರ್ಥ ವಿಷಮಯ ಸರ್ಪ, ಜಾತಿ ಹೆಡೆಯೆತ್ತಿ ಬಿಚ್ಚಿ ಬುಸುಗುಟ್ಟುತ್ತಿದೆ ಕಚ್ಚುತಿದೆ ನೋಡ'. ರೈಗಳ ಆದರ್ಶ ಬರೇ ಜಾತಿ ಧರ್ಮ ಸಾಮರಸ್ಯದ ತೇಪೆ ಹಚ್ಚುವುದಲ್ಲ - ವಿಷಮ ವಿಷಮಯ ಸಮಾಜದ ಬೇರ ಕಿತ್ತೊಗೆಯೆ ಕೊಡಲಿ ಲೇಖನಿ ಬೇಕು - ರಕ್ತವದಕೆ ಮಸಿ!

'ಪುನರ್ನವ' (1961) ಸಂಕಲನದ 'ರಾಷ್ಟ್ರನಟ' ಕವನದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯವನ್ನು ಕುರಿತ ರೈಗಳ ಅತೃಪ್ತಿ ವ್ಯಕ್ತವಾಗುತ್ತದೆ. "ಬಿಳಿಜನರ ಪೀಠದಲಿ ಕರಿಜನರು ಕುಳಿತಲ್ಲಿ ಬಿಡು ಬಂತೆಂದು ಹಿಗ್ಗಲುಂಟೆ"? ಎನ್ನುವಲ್ಲಿರುವುದು ರಾಜಕಾರಣಿಗಳ, ಅಧಿಕಾರಶಾಹಿಯ ಜನವಿರೋಧಿ ಧೋರಣೆಗಳನ್ನು ಕುರಿತ ವ್ಯಂಗ್ಯ. 'ಚೇತನ'ದಲ್ಲಿರುವ 'ಹೇ ರಾಮ', ರೈಗಳು 1969ರಲ್ಲಿ ಬರೆದ ಕವನ. ಈ ಕವನದಲ್ಲಿ ಕವಿ 'ಬೊಬ್ಬೆ ಹೊಡೆದು ಬಡತನವೋಡಿಸುವ' 'ನಡೆ ನುಡಿಯಲಿ ಭೇದವಿರುವ ನೆಹರೂ ಯುಗದ 'ಗಾಂಧೀಭಕ್ತ' ರಾಜಕಾರಣಿಗಳ ವೈಫಲ್ಯಗಳ ಬಗ್ಗೆ ಅದೃಶ್ಯರೂಪಿ ಗಾಂಧೀಜಿಗೆ ವರದಿ ಒಪ್ಪಿಸುತ್ತಾರೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯನ್ನು, ಗ್ರಾಮೀಣ ಭಾರತ, ನಗರ ಭಾರತಗಳೆಂಬ ಹೊಸ ವಿಭಾಗ ಉಂಟಾಗಿರುವುದನ್ನೂ ಗಮನಿಸುತ್ತಾರೆ. "ಕತ್ತಲು ಮುತ್ತಿದೆ ಹಳ್ಳಿಯ ಬದುಕು ಬಾಂದಳ ಬೆಳಗಿದೆ ದಿಲ್ಲಿಯ ಬೆಳಕು", ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಹಿಂಸಾ ಪ್ರಧಾನವಾದ ಕ್ರಾಂತಿ ನಡೆಯಬಹುದೆಂಬ ಸೂಚನೆ ಕೊನೆಯಲ್ಲಿದೆ - ಬರುವನು ಕಲ್ಕಿ ಕುದುರೆಯ ಹತ್ತಿ. ಸ್ವಾತಂತ್ರ್ಯೋತ್ತರ ಭಾರತದ ಬಡತನ, ವೈಫಲ್ಯಗಳು, ಅಸಮಾನತೆಯನ್ನು ಚಿತ್ರಿಸುವಾಗಲೆಲ್ಲ ರೈಗಳಿಗೆ ಗಾಂಧೀಜಿಯ ರಾಮರಾಜ್ಯದ ಕನಸು ನೆನಪಾಗುತ್ತದೆ. ವರ್ತಮಾನದ ಸಂಕಟವನ್ನು ಕಂಡಾಗ ಅವರು ಹಿಮ್ಮಿಂಚಿನಲ್ಲಿ ಗಾಂಧೀಜಿಯತ್ತ ಧಾವಿಸಿ ಶರಣಾಗುತ್ತಾರೆ. 'ಕಾಲಾತೀತ' ಕವನದಲ್ಲಿ ಗಾಂಧೀ ಪ್ರತಿಮೆಯ ಬಳಿಯಲ್ಲಿ ಚರಂಡಿ ಬದಿಯಲ್ಲಿ ಕಣ್ಣೀರ್ಗರೆಯುತ್ತ ಕುಳಿತು 'ಆ ಮಹಡಿ ಮೇಲಿಂದ ಎಸೆದಯೆಂಜಲ ಹೆಕ್ಕಿ ಮುಕ್ಕುವ' ಭಾರತದ ನಿರ್ಭಾಗ್ಯ ಮಾತೆಯೊಬ್ಬಳನ್ನು ಕವಿ ಚಿತ್ರಿಸುತ್ತಾರೆ. ಇದು ಮಹಾ ನಗರಗಳ ನಡುವೆ ಮಹಾ ಸ್ಲಮ್ಮುಗಳಿರುವ ಭಾರತ. ಇಂಥ ಅಸಮಾನತೆ ಇಲ್ಲವಾಗಿ, ಭಯವಿಲ್ಲ, ದಯೆಯೇ ಎಲ್ಲ. ಶೋಷಣೆಯ ಘರ್ಷಣೆಯಯ ಸುಳಿವಿಲ್ಲ, ಎಲ್ಲವು ನಿರಾತಂಕ, ಎಲ್ಲೆಲ್ಲು ನಿಶ್ಯಂಕ, ಸಮಸುಖಿಗಳೆಲ್ಲರೂ ಆಗಿರುವ ರಾಜ್ಯವೊಂದರ ಕನಸು ಕಾಣುತ್ತಾರೆ. ಆದರೆ ಇಪ್ಪತ್ತೈದು ವರ್ಷಗಳ ಆಡಳಿತದ ಸೋಲುಗಳಿಗೆ ಕಾರಣಗಳೇನೆಂಬ ಶೋಧವಾಗಲೀ, ಭವಿಷ್ಯದ ಬದಲಾವಣೆಗೆ ಸಂಬಂಧಿಸಿದ ಸಿದ್ಧಾಂತಗಳ ಆಯ್ಕೆಯ ಚಿಂತನೆಯಾಗಲಿ ಇಲ್ಲಿಲ್ಲ.

'ಗೋವೆಯ ಕರೆ' 'ಬಂಗ್ಲಾಗಾನ' - ಕಯ್ಯಾರರ ಇಂಥ ಕವನಗಳು ಒಂದು ರೀತಿಯಲ್ಲಿ ವಿದೇಶಾಂಗ ವ್ಯವಹಾರವನ್ನು ಕುರಿತ ತತ್‍ಕ್ಷಣದ ಪ್ರತಿಕ್ರಿಯೆಗಳು. 'ಲೆನಿನ್' ಕುರಿತು 'ಹಿಂಸೆ ಕಳೆದರೆ ಗಾಂಧಿತಾತನದೆ ನಿನಗೆ ಬೆಲೆ' ಎಂದಿದ್ದ ಕವಿ 'ಬಂಗ್ಲಾಗಾನ'ದಲ್ಲಿ - 'ಇಂಥ ಶಾಂತಿಯ ಪಡೆವ ಕ್ರಾಂತಿ ಬರಲಿ' ಎನ್ನುತ್ತಾರೆ. ಚೀನೀ ಆಕ್ರಮಣ ಸಂದರ್ಭದಲ್ಲಿ ಬರೆದ 'ಯೋಧಗಾಥ' ಕಥನಕವನವಾಗಿ ಗಮನ ಸೆಳೆಯುತ್ತದೆ. ಅಪೊಲೊ 11ರ ಗಗನಯಾತ್ರಿಗಳ ಚಂದ್ರಲೋಕ ಯಾತ್ರೆ (1963)ಯನ್ನು ಕುರಿತ 'ಉನ್ಮುಖ ವಿಲಾಸಿ' ವೈಜ್ಞಾನಿಕ ಅನ್ವೇಷಣೆಗಳನ್ನು ಕವಿ ಹೇಗೆ ಗ್ರಹಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಕುತೂಹಲಕಾರಿ.

ರಾಷ್ಟ್ರೀಯ ಚಳವಳಿಯಲ್ಲಿ ಹೇಗೊ, ಹಾಗೆ ಕಯ್ಯಾರರ ಕಾವ್ಯದಲ್ಲೂ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಗಳು ಸಮಾನಾಂತರವಾಗಿ ಸಾಗುತ್ತವೆ. ರಾಷ್ಟ್ರವಿಭಜನೆಯ ಆಘಾತದಿಂದ ಚೇತರಿಸಿಕೊಂಡ ರೈಗಳು ಭಾಷಾವಾರು ರಾಜ್ಯರಚನೆಯಲ್ಲಿ ಕಾಸರಗೋಡಿಗಾದ ಅನ್ಯಾಯದಿಂದ ನೊಂದರು. 'ಬೆಂಕಿ ಬಿದ್ದಿದೆ ಮನೆಗೆ' ಕವನದಲ್ಲಿ ಎಲ್ಲೂ ಕಾಸರಗೋಡಿನ ಹೆಸರಿಲ್ಲ. ರೈಗಳ ಈ ಕವನ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಗಳ ನಡುವೆ ಉಂಟಾಗಿರುವ ಸಂಘರ್ಷದ ಸಂಕೇತ. ಈ ದ್ವಂದ್ವ ಮೀಮಾಂಸೆಯಿಂದಲೇ ಭಾರತದ ಒಕ್ಕೂಟ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗಬೇಕಾಗಿದೆ. ಭಾಷಾಬಾಂಧವ್ಯದ ಸಾಮರಸ್ಯತೆಯನ್ನು ಜಗತ್ತಿಗೆ ತೋರಿಸಲಿಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ಸಾಧ್ಯ ಉಂಟು' ಎನ್ನುವ ಕಯ್ಯಾರರು ಈ ಜಿಲ್ಲೆಯನ್ನು ತುಳುನಾಡು ಅಥವಾ ತುಳುಪ್ರಾಂತ್ಯವನ್ನಾಗಿ ಮಾಡಬೇಕೆಂದು ಪ್ರತಿಪಾದಿಸುತ್ತಾರೆ.

4

'ಕೊರಗ' ರೈಗಳ ಪ್ರಮುಖ ಜನಪರ ಕವನ. ಕೊರಗ ತುಳುನಾಡಿನಲ್ಲಿ ಅತ್ಯಂತ ಹಿಂದುಳಿದಿರುವ ದಲಿತ ಜನಾಂಗವೊಂದರ ಹೆಸರು. ಕೊರಗನ ದಿನಚರಿ ಸ್ಥಿತಿ-ಗತಿಗಳ ಚಿತ್ರಣದಿಂದ ಆರಂಭವಾಗುವ ಈ ಕವನ ಉತ್ತರಾರ್ಧದಲ್ಲಿ ಶ್ಲೇಷೆಯನ್ನು ಮೀರಿ ವ್ಯಂಗ್ಯದತ್ತ ಹೊರಳುತ್ತದೆ. ನಾಡನಾಳುವ ಮಂದಿ ವೇದಶುದ್ಧ ಸಮಾಜ, ಮುಖಕೆ ಉರುಳುವ ತೆರದಿ ಇವನ ಪೀಳಿಗೆಗೆಸೆದ ಹೆಸರು ಕಾಡಿನ ಕೊರಗ! ಎನ್ನುವ ಸಾಲು ನಮ್ಮ ಸಂಸ್ಕೃತಿಯಲ್ಲಿನ ತತ್ವಜ್ಞಾನ ಕ್ಷೇತ್ರದ ಸಹಿಷ್ಣುತೆ, ಜಾತೀಯ ಏಣಿ ಶ್ರೇಣಿಯ ಸಮಾಜದಲ್ಲಿರುವ ಕ್ರೌರ್ಯ - ಈ ವೈರುಧ್ಯವನ್ನು ವಿಡಂಬಡಿಸುತ್ತದೆ. 'ಬುದ್ಧ, ಕ್ರಿಸ್ತ, ಮಹಮ್ಮದ ಮುಂತಾದ ಶಕಪುರಷರೆಲ್ಲರೂ ಅಂದಿನಿಂ ಬೋಧಿಸಿದರಿಂದಿಗೂ ಇವ ಕೊರಗ!' ಎನ್ನುವುದು ಜನವಿದೂರವಾದ ಎಲ್ಲ ಧಾರ್ಮಿಕ ವ್ವವಸ್ಥೆಗಳನ್ನು ಕುರಿತ ವ್ಯಂಗ್ಯ. ಕೊನೆಯಲ್ಲಿ ಕವಿ ಉದ್ಧರಿಸುವ ಗೀತೆಯ 'ನೈನಂ ಛಿಂದಂತೆ ಶಸ್ತ್ರಾಣಿ' ಎಂಬ ಆತ್ಮ ಪರಮಾತ್ಮದ ತತ್ವದ ಶ್ಲೋಕ, ಕೊರಗನ ಯಥಾಸ್ಥಿತಿಯನ್ನು ಮಾತ್ರವಲ್ಲ ಹಿಂದೂ ಸಮಾಜದ ಜಾತಿ ವ್ಯವಸ್ಥೆಯ ಸ್ಥಾವರ ಸ್ಥಿತಿಯನ್ನೂ ಧ್ವನಿಸುತ್ತದೆ. ಇರುವ ಸ್ಥಿತಿಯನ್ನು ಹೇಳುತ್ತಲೇ ಇರಬೇಕಾದ್ದನ್ನು ಸೂಚಿಸುವ 'ಕೊರಗ'ದಲ್ಲಿ ಸ್ವಭಾವೋಕ್ತಿ ಧ್ವನಿತತ್ವದ ಸವಾಲನ್ನೆದುರಿಸಿ ಸಾರ್ಥಕವಾಗಿದೆ. ರೈಗಳ ಹೆಚ್ಚಿನ ಕವನಗಳಲ್ಲಿರುವ ವಾಚಾಳಿತನ ಇಲ್ಲಿಲ್ಲ. ಇಲ್ಲಿ ವಿಡಂಬನೆಯಿರುವುದು ಬೂದಿ ಮುಚ್ಚಿದ ಕೆಂಡದ ಹಾಗೆ. ಪಂಜೆಯವರು 'ಹೊಲೆಯನ ಹಾಡು' ಬರೆದು ಹಲವು ದಶಕಗಳ ಅನಂತರ ರೈಗಳು 'ಕೊರಗ' ಕವನ ಬರೆದಿರುವುದರಲ್ಲಿ ಒಂದು ಐತಿಹಾಸಿಕ ಅಪ್ರಿಯ ಸತ್ಯವಿದೆ. ಸಮಾನತೆ ಸಂವಿಧಾನದಲ್ಲಿದೆಯೇ ಹೊರತು ಲಕ್ಷಗಟ್ಟಲೆ ಹಿಂದುಳಿದ ಜನರನ್ನು ಅದು ತಲುಪಿಲ್ಲ. 'ಹಿಂದು ನಾವೆಲ್ಲ ಒಂದು' ಎಂಬ ಘೋಷಣೆ ಮಾತ್ರ ಕೇಳಿಸುತ್ತಿದೆ.

'ಅತಿಥಿ' ಕಯ್ಯಾರರ ಒಳ್ಳೆಯ ಚಿಂತನಪರ ಕವನಗಳಲ್ಲೊಂದು. ಈ ಕವನದ ನಿರೂಪಕ ತುಂಬು ಬದುಕನ್ನು ನಡೆಸಿ ಮೃತ್ಯುವನ್ನು ಸ್ವಾಗತಿಸಲು ಸಿದ್ಧನಾಗುತ್ತಿದ್ದಾನೆ. ಸಾವು ಅತಿಥಿಯೂ ಹೌದು, ತಿಥಿ ತಪ್ಪಿಸಿ ಆಕಸ್ಮಿಕವಾಗಿ ಬರುವುದೂ ಹೌದು. ಜೀವಾನುಭವದಿಂದ ಮಾಗಿರುವ ನಿರೂಪಕ ಸಾವು ಬಾಗಿಲು ತಟ್ಟಿ ಬರುತ್ತಿರುವುದನ್ನು ಕಾಯುತ್ತಿದ್ದಾನೆ. ಸ್ಥಿತಪ್ರಜ್ಞನಾಗಿರುವ ಇವನಲ್ಲಿ ಆತುರವಾಗಲಿ, ಸಾವಿನ ಅನಂತರದ ಸ್ಥಿತಿಯ ಕುರಿತು ಚಿಂತನೆಯಾಗಲಿ ಭಯವಾಗಲಿ ಇಲ್ಲ.

ರೈಗಳ ಇನ್ನೊಂದು ಮುಖ್ಯ ಕವನ 'ಭಾಗವತ'. ಸುಬ್ರಾಯ ಚೊಕ್ಕಾಡಿಯವರು ಹೇಳುವಂತೆ, ಪ್ರಕೃತಿಯ ವ್ಯಾಪಾರಗಳಿಗೆ ಯಕ್ಷಗಾನದ ಚೌಕಟ್ಟನ್ನು ಆರೋಪಿಸಿ, ಆ ಮೂಲಕ ಬಾಳಿನ ಅರ್ಥವನ್ನು ಕಾಣುವ ಯತ್ನ ಈ ಕವನದಲ್ಲಿದೆ. ಆದರೆ ಈ ಪ್ರಯತ್ನ ವಾಚ್ಯವಾಗುವ ಮೂಲಕ ಬಿಗಿ ತಪ್ಪಿಹೋಗುತ್ತದೆ. " ಸೃಷ್ಟಿರೂಪಕದ ಸೂತ್ರ ಪಾತ್ರಗಳ| ಜೋಡಿಸುವನು ಭಗವಂತ|
ಅದರ ಪ್ರತಿಬಿಂಬ ಬಿದ್ದ ಬಯಲಾಟ| ಆಡಿಸುವನು ಭಾಗವತ" ಈ ವಾಚ್ಯತೆಯಿಂದಲೇ ಕವಿತೆ ಸಡಿಲವಾಗಿ, ಮಾತುಗಾರಿಕೆಯ ಕೈಯೇ ಮಿಗಿಲಾಗುತ್ತದೆ. 'ಬಿಂಬ ಭಗವಂತ' ಮುಖ್ಯವಾಗಿ, 'ಪ್ರತಿಬಿಂಬ' ಭಾಗವತ ಅಮುಖ್ಯನಾಗುವುದರಿಂದ ಯಕ್ಷಗಾನದ ಭಾಗವತನ ಪ್ರಾದೇಶಿಕ ಬಣ್ಣ ಇಲ್ಲಿ ಕಾಣಸಿಗುವುದಿಲ್ಲ.

ರೈಗಳು ಬರೆದಿರುವ ವ್ಯಕ್ತಿಚಿತ್ರ ಕವನಗಳಲ್ಲಿ 'ಶೂದ್ರಕ' 'ಲೆನಿನ್' 'ಎಂಥ ಕಾಣ್ಕೆಗೆ ಕಣ್ಗಳಿತ್ತೆ� (ಕುವೆಂಪು), 'ಮಣಿವೆ' (ಠಾಗೋರ್) ಸುನೀತಗಳ ರೂಪದಲ್ಲಿವೆ. ನವೋದಯ ಋಷಿ (ಪಂಜೆ), 'ರಾಷ್ಟ್ರಕವಿ' (ಗೋವಿಂದ ಪೈ), 'ನೂರು ನೂರು ಕಣ್ಣೀರು' (ಮುದ್ದಣ), 'ಮಲೆಯ ಗಜರಾಜ ಮನೆಗೆ ಬಂದಿತು' (ಬಸವಣ್ಣ), 'ಕಾಗಿನೆಲೆಯಲ್ಲಿ ಕೋಗಿಲೆಯ ಕುಹೂ' (ಕನಕದಾಸ) ಸುದೀರ್ಘ ವ್ಯಕ್ತಿಚಿತ್ರ ಕವನಗಳು. ಗೌರೀಶ ಕಾಯ್ಕಿಣಿಯವರು 'ಮಲೆಯ ಗಜರಾಜ ಮನೆಗೆ ಬಂದಿತು' ಕವನದ ಬಗ್ಗೆ ನೀಡಿರುವ ಅಭಿಪ್ರಾಯ ರೈಗಳ ಎಲ್ಲ ಸುದೀರ್ಘ ವ್ಯಕ್ತಿಚಿತ್ರ ಕವನಗಳ ಮಟ್ಟಿಗೂ ನಿಜ - ಕಾವ್ಯಾತ್ಮಕತೆಯ ಸತ್ವ ಇತಿವೃತ್ತಾತ್ಮಕತೆಯಲ್ಲಿ ಸಡಿಲವಾಗಿದೆ. ಈ ಕವಿಗೆ ಸೂಚ್ಯದಲ್ಲಿ ತೃಪ್ತಿ ಇಲ್ಲ. ವಾಚ್ಯದ ವ್ಯಾಪ್ತಿಯಲ್ಲಿ ಆಸಕ್ತಿ. ಪರಿಪರಿಯಿಂದ ವಿವರಗಳನ್ನು ತುಂಬಿ, ಅವುಗಳಿಗೆ ಭಾವದ ರಾಗರಂಜನೆ ತುಂಬಿ, ಕವನವನ್ನು ಬಣ್ಣದ ರಂಗೋಲಿಯಾಗಿಸುವುದು ಇವರ ತಂತ್ರ. ಜತೆಗೆ ಅಧ್ಯಾಪನದತ್ತ ಒಲವು. ಪ್ರತ್ಯಕ್ಷವಾಗಿ, ಪರ್ಯಾಯವಾಗಿ ಕವಿ ತತ್ವೋಪರನಾಗಿಬಿಡುತ್ತಾನೆ.

ರೈಗಳ ಮನೆಮಾತು ತುಳು. 1930ರ ದಶಕದಲ್ಲಿ ಎಸ್.ಯು. ಪಣಿಯಾಡಿಯವರ ಧುರೀಣತ್ವದಲ್ಲಿ ಆರಂಭವಾದ ತುಳುಸಾಹಿತ್ಯ ಚಳವಳಿಯಿಂದ ರೈಗಳು ವಿಶೇಷವಾಗಿ ಆಕರ್ಷಿತರಾಗಲಿಲ್ಲ. ಇತ್ತೀಚೆಗೆ ತುಳುಸಾಹಿತ್ಯ ಚಳವಳಿಯ ಎರಡನೆಯ ಹಂತದಲ್ಲಿ ರೈಗಳು ಹಲವು ತುಳು ಕವನಗಳನ್ನು, ಲೇಖನಗಳನ್ನು ಬರೆದಿದ್ದಾರೆ. 'ಪರಿವು ಕಟ್ಟುಜಿ, ರಡ್ಡ್ ಕಣ್ಣ್‌ಡ್' 'ಸಾರೊ ಎಸಳ್ದ ತಾಮರೆ' 'ಲೆಪ್ಪುನ್ಯೇರ್?' 'ಬತ್ತನೊ ಈ ಬರ್ಪನೊ' - ರೈಗಳ ಕೆಲವು ತುಳು ಕವನಗಳು. ರೈಗಳ ಕನ್ನಡ ಕವಿತೆಗಳಲ್ಲಿ ಹೆಚ್ಚಾಗಿ ಕಾಣಸಿಗದ ಪ್ರಾದೇಶಿಕ ರಂಗು, ಜಾನಪದ ಲೋಕ ಅವರ ತುಳು ಕವಿತೆಗಳಲ್ಲಿ ಅರಳಿಕೊಳ್ಳುತ್ತದೆ. 'ಕನ್ನಡಾಂತರ್ಗತವಾದ ತುಳು ಬದುಕ'ನ್ನು ಒಪ್ಪಿದ ಕವಿ ತುಳು ಭಾಷೆಯ ಸ್ಥಿತಿಗತಿಯ ಬಗ್ಗೆ ವ್ಯಥೆಪಡುತ್ತಾರೆ - "ಅಂಚಿ ತೆಲುಗೆರ್, ಇಂಚಿ ಕನ್ನಡೆರ್ ! ಎಂಚ ತಮಿಳೆರ್ ಮರೆಪೆರ್ ! ಕಣ್ಣೆದುರೆ ಕೇರಳಲು ಕೆಲಪುಂಡು ! ಎನ್ನ ತುಳುನಾಡು ಬುಲಿಪುಂಡು."

(ಆಯ್ದ ಭಾಗ)



ಕಯ್ಯಾರ ಕಿಞ್ಞಣ್ಣ ರೈ - ಒಂದು ಪ್ರಸ್ತಾವನೆ

ಮುರಳೀಧರ ಉಪಾಧ್ಯ ಹಿರಿಯಡಕ (1989) (mhupadhya@gmail.com)

ಪ್ರ - ಕಯ್ಯಾರ 75 ಅಭಿನಂದನ ಸಮಿತಿ, ಮಣಿಪಾಲ



1 comment:

  1. ಮಾನ್ಯ ಉಪಾಧ್ಯರೆ,
    ತೊಂಬತ್ತೆಂಟರ ಹರಯದ ಕಿಞ್ಞಣ್ಣ ರೈ. ' ಅವರ ಬಗ್ಗೆ ತಾವು ಬ್ಲಾಗಿಸಿದ ಲೇಖನವನ್ನು ಇದೀಗ ಓದಿದೆ . ಅವರ ಮೊದಲ ಕವಿತೆ 'ಸ್ವದೇಶಾಭಿಮಾನಿ'ಯಲ್ಲಿ ಅಚ್ಚಾದಾಗ ವಿದ್ಯಾರ್ಥಿಯಾಗಿದ್ದ ರೈಗಳಿಗೆ- ಖುಷಿಯೋ ಖುಷಿ. "ಅಚ್ಚಾಗಿ ಬರುವಾಗ ಹುಚ್ಚಾಗಿ ಹೋಗಿಹೆನು ನೆಲವ ಬಿಟ್ಟೇರಿಹೆನು ಬಾನಿನೆಡಗು",- ಎಂಬ ವಾಕ್ಯ ಗಳು ಅವರಿಗಿಂತ ಇಪ್ಪತ್ತೆಂಟು ವರ್ಷ ಚಿಕ್ಕವಳಾದ ಅಂದರೆ ಎಪ್ಪತ್ತರ ಹೊಸ್ತಿಲಲ್ಲಿರುವ ನನ್ನಲ್ಲಿ ನನ್ನ ಮೊದಲ ಕವಿತೆ ಪ್ರಕಟವಾದ ದಿನದ ನೆನಪು ತಂದವು. ನಾನು ಅವರಂತೆ ಮಹಾನ್ ಕವಿಯಾಗಲಿಲ್ಲ ನಿಜ. ಆದರೆ ಅವರ ಆದಿನದ ನೆನಪುಗಳಿಗೂ ನನ್ನ ಆದಿನದ ನೆನಪುಗಳಿಗೂ ಏನೋ ಒಂದು ಅನುಬಂಧ, ಸಂಬಂಧ ವಿರುವ ಅನುಭೂತಿಯುಂಟಾಯಿತು. ಕವಿಗಳ
    -ಸೃಜನ- ಶೀಲರ ಮೊದಲ ಅನುಭವವು ಸಮಾನ ನೆಲೆಯಲ್ಲಿ ಪ್ರಕಟವಾಗುವ ಸಾಧ್ಯತೆಗಳೇ ಹೆಚ್ಚು ಅಲ್ಲವೇ? ನನ್ನ ಮೊದಲ ಕವಿತೆ ಲಿಂಗರಾಜ ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟ ವಾದ ದಿನ ನಾನು ನಾನು ಕಾಲೇಜ ಕೆಂಪಾಸಿ ನಲ್ಲಿ ನಡೆಯುತ್ತಿದ್ದಾಗ- ಇವಳೆ ನೋಡು ಆ ಕವಿತೆ ಬರೆದವಳು- ಎಂದು
    ಕೊಳ್ಳುತ್ತ ಅಲ್ಲಿದ್ದವರು ನನ್ನಕಡೆಯೇ ನೋಡುತ್ತಿದ್ದಾರೆ ಎಂದು ನನಗನಿಸುತ್ತಿತ್ತು.
    ಹೊನ್ನಾವರದ ಎಸ್ ಎಸ್, ಡಿ ಎಮ್ ಕಾಲೇಜಿಗೆ ಅಥಿತಿಗಳಾಗಿ ಬಂದ ರೈ ನಮ್ಮ ಮನೆಗೆ ಅನಿರೀಕ್ಷಿತವಾಗಿ ಬಂದಿದ್ದರು ಆಗ ನಮಗಾಗಿ ತಯಾರಿಸಿ ಕೊಂಡ ಸಾದಾ ಅಡುಗೆಯನ್ನು ಬಡಿಸಿದ್ದೆ. ಅನೇಕ ವರ್ಷಗಳ ಬಳಿಕ ನಾವಿಬ್ಬರೂ ಕಾಸರಗೋಡಿನ ಇವರ ಮನೆಗೆ ಹೋದಾಗ ತಮ್ಮ ಪತ್ನಿಗೆ ನಮ್ಮನ್ನು ಪರಿಚಯಿಸುತ್ತ ಇವರು ನನಗೆ ಪಕ್ವಾನ ಬಡಿಸಿದ್ದರು . ಇವರನ್ನು ಈ ದಿನ ಇಲ್ಲಿಯೇ ಉಳಿಸಿ ಕೊಂಡು ಉತ್ತಮ ಅಡಿಗೆ ಮಾಡಿ ಬಡಿಸೋಣ. ಎಂದರು. ಹಿರಿಯ ವ್ಯಕ್ತಿತ್ವಕ್ಕೆ ಎಲ್ಲವೂ ಹಿರಿಯದಾಗಿ ಕಂಡು ಬರುವದು ಆಶ್ಚರ್ಯ್ವವಲ್ಲ. ಅಲ್ಲವೇ? ಶತಾಯುಷ್ಯ ದಾಟುವತ್ತ ದಾಪು ಗಾಲಿಡುತ್ತಿರುವ ಅವರ ದೇಶಾಭಿಮಾನ ಹಿರಿಯ ನಡತೆ ನಮ್ಮ ಮಕ್ಕಳಿಗೆ ಆದರ್ಶವಾಗಿರಲಿ.
    ಶಾಂತಿ ನಾಯಕ.

    ReplyDelete