stat Counter



Wednesday, December 15, 2010

Gopalakrishna Adiga - Cultural Scrutiny

ಆಧುನಿಕ ಕನ್ನಡ ಸಾಹಿತ್ಯದಲ್ಲಿ ವೈಚಾರಿಕ ಕವಿ - ಅಡಿಗ


-ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ
1


ಮಿತ್ರರೆ,
 ನಮ್ಮ ಹಾಸ್ಯ ಕವಿ ದುಂಡಿರಾಜರು ಅಡಿಗರ ಕುರಿತು ಬರೆದಿರುವ ಒಂದು ಕವನ ಹೀಗಿದೆ:
ಸಂಪ್ರದಾಯ ಶರಣರು
ಕ್ರಾಂತಿಕಾರಿ ಎಂದು ದೂರಿದರು
ಅಡಿಗರನ್ನು
ಬಂಡಾಯದವರು
ಪ್ರತಿಗಾಮಿ ಎಂದು ಸಾರಿದರು
ಅಡಿಗರನ್ನು
ದಲಿತರು ಪುರೋಹಿತಶಾಹಿ
ಎಂದು ಕರೆದರು
ಅಡಿಗರನ್ನು
ಕಮ್ಯೂನಿಷ್ಟರು 'ಜನಸಂಘಿ'
ಎಂದು ಜರೆದರು
ಅಡಿಗರನ್ನು
ನಸುನಗುತ್ತ ಎದುರಿಸಿ
ಎಲ್ಲ ಬಗೆಯ ದಾಳಿಯನ್ನು
ಬಾರಿಸುತ್ತಲೇ ಹೋದರು
ಅಡಿಗ-ರನ್ನು
ರನ್ನುಗಳ ಮೇಲೆ ರನ್ನು
ಕಾವ್ಯಲೋಕದ 'ಬ್ರಾಡ್ಮನ್ನು'

 ನಾನು ಮಂಗಳೂರಿನಲ್ಲಿ ಕನ್ನಡ ಎಂ.ಎ. ಓದುತ್ತಿದ್ದಾಗ, ನನ್ನ ಗುರುಗಳಾಗಿದ್ದ ಶ್ರೀ ಎಸ್.ವಿ. ಪರಮೇಶ್ವರ ಭಟ್ಟರು 'ಮಣ್ಣಿನ ವಾಸನೆ ಹಣ್ಣಿಗೆ ಬಂದರೆ ಹಣ್ಣನು ಯಾರು ತಿಂದಾರು?' ಎಂಬ 'ಏಳೆ' ಬರೆದಿದ್ದರು.  ಅಡಿಗರ ನವ್ಯ ಕಾವ್ಯವನ್ನು ಕುರಿತ ಅವರ ಪ್ರತಿಕ್ರಿಯೆ ಈ ಸಾಲಿನಲ್ಲಿತ್ತು.

 ಅಡಿಗರು ಉಡುಪಿಯಲ್ಲಿದ್ದಾಗ ನಡೆಸುತ್ತಿದ್ದ 'ರೈಟರ್ಸ್ ಕ್ಲಬ್'ನ ಒಂದೆರಡು ಸಭೆಗಳಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿತ್ತು.  1926ರಲ್ಲಿ ಸುಬ್ರಾಯ ಚೊಕ್ಕಾಡಿ ಮತ್ತು ನಾನು ಸಂಪಾದಿಸಿದ 'ದಕ್ಷಿಣ ಕನ್ನಡ ಕಾವ್ಯ' ಗ್ರಂಥದ ಬಿಡುಗಡೆಗೆ ಅಡಿಗರು ಬೆಂಗಳೂರಿನಿಂದ ಉಡುಪಿಗೆ ಬಂದಿದ್ದರು.  1996ರಲ್ಲಿ ನಾನು ಯು.ಆರ್. ಅನಂತಮೂರ್ತಿಯವರ 'ಸಂಸ್ಕೃತಿ ಮತ್ತು ಅಡಿಗ' ಗ್ರಂಥವನ್ನು ಸಂಪಾದಿಸಿದೆ.

 ಅಡಿಗರ ಕಾವ್ಯ ಓದುವಾಗ ಕುರುಸೋವನ 'ರಶೋಮನ್' ಸಿನಿಮಾದ ನೆನಪಾಗುತ್ತದೆ.  ಅದರಲ್ಲಿ ಒಂದೇ ಘಟನೆಯನ್ನು ಹತ್ತು ಜನ ಹತ್ತು ರೀತಿಯಲ್ಲಿ ಅರ್ಥೈಸುತ್ತಾರೆ.  ಅಡಿಗರ ಕಾವ್ಯ ಬಹುರೂಪಿ ಅರ್ಥಸಾಧ್ಯತೆಗಳ ಧ್ವನಿಪೂರ್ಣ ಕಾವ್ಯ.  1950ರ ದಶಕದ 'ನಡೆದು ಬಂದ ದಾರಿ' ಸಂಕಲನದಲ್ಲಿ ಭೂದೇವಿಯ ತೊಡೆಯ ಮೇಲೆ ತಲೆ ಇಟ್ಟು 'ಗಾಂಧಿ, ಗಾಂಧಿ, ಗಾಂಧಿ' ಎಂದು ಕನವರಿಸುವ ಅಡಿಗರನ್ನು ಕಾಣುತ್ತೇವೆ.  ಗಾಂಧೀವಾದಿಯಾಗಿದ್ದ ಅಡಿಗರನ್ನು ರಾಜಾಜಿಯವರ 'ಸ್ವರಾಜ್ಯ ಪಾರ್ಟಿ'
ಆಕರ್ಷಿಸಿತು.  ಒಮ್ಮೆ ರಾಜಾಜಿ ಮೈಸೂರಿಗೆ ಬಂದಾಗ ಅವರ ಇಂಗ್ಲಿಷ್ ಭಾಷಣವನ್ನು ಅಡಿಗರು ಕನ್ನಡಕ್ಕೆ ಭಾಷಾಂತರಿಸಿದರು.  ಮುಂದೆ, ಗಾಂಧೀವಾದ ಮತ್ತು ಮಾರ್ಕ್ಸ್‌ವಾದದ ಉತ್ತಮ ಅಂಶಗಳ ಮಿಶ್ರಣವಾಗಿದ್ದ 'ಲೋಹಿಯಾವಾದ' ಅಡಿಗರನ್ನು ಸೆಳೆಯಿತು.  ಸಾಗರಕ್ಕೆ ಬಂದಿದ್ದ ರಾಮಮನೋಹರ ಲೋಹಿಯಾರನ್ನು ಅಡಿಗರು ಭೇಟಿಯಾಗಿದ್ದರಂತೆ.  ಆದರೆ ಅಡಿಗರ ಆತ್ಮಕತೆಯಲ್ಲಿ ಈ ಭೇಟಿಯ ವಿವರಗಳಿಲ್ಲ.  ಅಡಿಗರು ಪ್ರಜಾಪ್ರಭುತ್ವವಾದಿಯಾಗಿದ್ದರು.  ಪ್ರತಿಯೊಬ್ಬ ವ್ಯಕ್ತಿಗೂ, ಪ್ರತಿಯೊಂದು ಆಭಿಪ್ರಾಯಕ್ಕೂ, ಪ್ರತಿಯೊಂದು ರಾಜಕೀಯ ಸಿದ್ಧಾಂತಕ್ಕೂ ಬೆಲೆ ಕೊಡುವಂಥ ರಾಜ್ಯಪದ್ಧತಿ ಬೇರೆ ಇಲ್ಲ ಅನ್ನುವುದು ಅವರ ನಂಬಿಕೆಯಾಗಿತ್ತು.

 'ಪ್ರಾರ್ಥನೆ' ಪ್ರಕರಣದಲ್ಲಿ ಅಡಿಗರ ವ್ಯಕ್ತಿಸ್ವಾತಂತ್ರ್ಯ ಕಾಳಜಿ, ಸ್ವಾಭಿಮಾನ ಸ್ಪಷ್ಟವಾಗುತ್ತದೆ.  'ಪ್ರಾರ್ಥನೆ' ಕವನ ಪ್ರಕಟವಾದಾಗ ಅದು ಅಶ್ಲೀಲ ಎಂದು ಕೆಲವರಿಗೆ ಅನ್ನಿಸಿತು.  ಕವನ ವಿವಾದಗ್ರಸ್ತವಾಯಿತು.  ಮುಖ್ಯಮಂತ್ರಿ ನಿಜಲಿಂಗಪ್ಪನವರ ಕಾರ್ಯದರ್ಶಿಯಿಂದ ಅಡಿಗರಿಗೆ ಬಂದ ಪತ್ರದಲ್ಲಿ, ನಿಮ್ಮ 'ಪ್ರಾರ್ಥನೆ' ಎಂಬ ಕವನದ ಬಗ್ಗೆ ಚರ್ಚಿ
ಸಲು ಮುಖ್ಯಮಂತ್ರಿಗಳು ನಿಮ್ಮನ್ನು ತಮಗೆ ಅನುಕೂಲವಾದ ದಿನ, ವೇಳೆಗಳಲ್ಲಿ ನೋಡಬಯಸುತ್ತಾರೆ ಎಂದಿತ್ತು.  ಅಡಿಗರು ಆ ಪತ್ರಕ್ಕೆ ಹೀಗೆ ಉತ್ತರ ಬರೆದರಂತೆ - "ನನ್ನ ಕವನದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಏಕೆ ಚರ್ಚಿಸಬೇಕೋ ನನಗೆ ತಿಳಿಯದು.  ಅಲ್ಲದೆ ಮುಖ್ಯಮಂತ್ರಿಗಳಿಗೆ ಅನುಕೂಲವಾದ ದಿನ ಮತ್ತು ವೇಳೆಯಲ್ಲೇ ಏಕೆ ಸಂಧಿಸಬಬೇಕು?  ನನಗೂ ಅನುಕೂಲವಾದ ದಿನ ಮತ್ತು ವೇಳೆ ಇರಬಹುದಲ್ಲವೆ?"

ಇತಿಹಾಸ ಮತ್ತು ಪರಂಪರೆಗಳನ್ನು ಕುರಿತ ಅಡಿಗರ ನಿಲುವನ್ನು ಅರ್ಥಮಾಡಿಕೊಳ್ಳಲು ಮೂರು ಭಾಗಗಳಲ್ಲಿರುವ ಅವರ 'ಇಂದು ನಮ್ಮೀ ನಾಡು' (195) ಎಂಬ ಕವನವನ್ನು ನೋಡೋಣ.  ಈ ಕವನದ ಮೊದಲ ಭಾಗದಲ್ಲಿ ಉತ್ಸವಮೂರ್ತಿ
ರಥವಿಳಿದು ದೇವಾಲಯದ ಮೂಲೆ ಕತ್ತಲಲ್ಲಿ ಮುಗ್ಗುತ್ತಿರುವ ಚಿತ್ರವಿದೆ.  ಎರಡನೆಯ ಭಾಗದಲ್ಲಿ ಅಸಮಾನತೆಯ ನಾಡು.  ಇಲ್ಲಿ 'ರೂಪಾಯಿ ಮಳೆ' 'ಗುಂಡೋದರರಿಗೆ ಮಾತ್ರ ದಕ್ಕು'ತ್ತದೆ.  ಮೂರನೆಯ ಭಾಗದಲ್ಲಿ ಸನಾತನ ವೃಕ್ಷವನ್ನು ಕುರಿತ ಅಡಿಗರ ವ್ಯಂಗ್ಯ ತೀಕ್ಷ್ಣವಾಗಿದೆ -

ಇದು ಸನಾತನ ವೃಕ್ಷವಣ್ಣ ನೇಣಿಗೆ ಬೇಕೆ
ಬೇರೆ ಆಧಾರ ಈ ಕೊಂಬೆಗಿಂತ
... ... ... ... ... ... ... ... ...
'ಇತ್ತು'ಗಳ ಧ್ವಜವ ಹಿಡಿದೆತ್ತಿ ನಿಲ್ಲೋ ಮಗು
'ಇದೆ'ಯ ಹೃದಯದ್ರಾವ ಬೇಡ ನಿನಗೆ.

 ಇತಿಹಾಸದ ವೈಭವೀಕರಣವನ್ನು ಅಡಿಗರು ಇಲ್ಲಿ ಹೇಗೆ ಗೇಲಿ ಮಾಡುತ್ತಿದ್ದಾರೆ, ಗಮನಿಸಿ.

 ಚಂದ್ರಶೇಖರ ನಂಗಲಿಯವರು ತಮ್ಮ ಉಪನ್ಯಾಸದಲ್ಲಿ 'ಕೂಪಮಂಡೂಕ'ದ ಸಾಲುಗಳನ್ನು ನೆನಪಿಸಿದರು - ಗೊನೆ ಬಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ, ಹಿಂಡು ಹಿಳ್ಳುಗಳಲ್ಲಿ ಪ್ರಾಣವೂರಿ.  'ಆಗಬೋಟಿ'ಯಲ್ಲೂ ಇದೇ ಅರ್ಥದ ಸಾಲುಗಳಿವೆ - ಕೊಳೆಯತೊಡಗಿದರೆ ಒಳ್ಳೇದು, ಕೆಟ್ಟದ್ದು ಎರಡೂ ಒಂದೇ, ಬರೀ ದುರ್ನಾತ.
.
 'ಆನಂದತೀರ್ಥರಿಗೆ' ಕವನದಲ್ಲೂ ಅಡಿಗರು ಮಧ್ವಾಚಾರ್ಯರನ್ನಾಗಲೀ, ಉಡುಪಿಯ ಇತಿಹಾಸವನ್ನಾಗಲೀ ವೈಭವೀಕರಿಸುವುದಿಲ್ಲ.  ಇಲ್ಲೂ 'ಇತ್ತು'ಗಳಿಗಿಂತ ಏನು 'ಇದೆ' ಎಂಬುದು ಮುಖ್ಯವಾಗುತ್ತದೆ - ಉಡುಪಿ ಹೀಗಿದೆ ಅಂತ ಕವಿ ಅಡಿಗರಿಗೆ ಅನ್ನಿಸಿತು -

ಇಲ್ಲಿ ಕಟ್ಟಿಗೆ ತೇರು ವರ್ಷ ವರ್ಷಕ್ಕೇರು
ಅಕ್ಕಿಮುಡಿ ಮುಡಿ ವಾದಿರಾಜ ಗುಳ್ಳ
ಪ್ರಾಣಮುಖ್ಯರ ಮುಟ್ಟು ಚಟ್ಟು ತೊಟ್ಟಿಗಳಲ್ಲಿ
ನಿಂತ ನೀರಿನ ವಾಸ ಸುತ್ತಲೆಲ್ಲ.

 ಉಡುಪಿಯ ಕೃಷ್ಣನ ಸನ್ನಿಧಿ 'ಮುಖ್ಯಪ್ರಾಣ'ನ ಬದಲು 'ಪ್ರಾಣಮುಖ್ಯ'ರಾದ ಸ್ವಾರ್ಥಿಗಳಿಂದ ತುಂಬಿದೆ.  ಕೃಷ್ಣ ಕನಕನ್ನು ತಿರುಗಿಸಿದರೆ ಅಡಿಗರು 'ಮುಖ್ಯಪ್ರಾಣ'ನನ್ನು ತಿರುಗಿಸಿದ್ದಾರೆ !

 ಪ್ರಜಾಪ್ರಭುತ್ವವನ್ನು ದುರುಪಯೋಗಪಡಿಸಿಕೊಂಡು ಕೆಲವು ರಾಜಕಾರಣಿಗಳು ಸರ್ವಾಧಿಕಾರಿಗಳಾಗಬಹುದು ಎಂಬ ಭಯ ಅಡಿಗರನ್ನು ಕಾಡುತ್ತಿತ್ತು.  1973ರಲ್ಲಿ ಬರೆದ 'ದೆಹಲಿಯಲ್ಲಿ' ಕವನದಲ್ಲಿ ಕವಿ ಅಡಿಗರ ರಾಜಕೀಯ ಮುನ್ನೋಟ, ಕಾಣ್ಕೆಗಳಿವೆ. (ಅಡಿಗರ ಭಯ ನಿಜವಾಯಿತು.  1975ರಲ್ಲಿ 'ತುತರ್ು ಪರಿಸ್ಥಿತಿ' ಘೋಷಣೆಯಾದಾಗ ಸರ್ವಾಧಿಕಾರದ ಅಪಾಯವನ್ನು ರಾಜಕಾರಣಿಗಳು ಮಾತ್ರವಲ್ಲ, ಜನಸಾಮಾನ್ಯರೂ ಮನಗಂಡರು.)  'ದೆಹಲಿಯಲ್ಲಿ' ಕವನದಲ್ಲಿ ಸರ್ವಾಧಿಕಾರಿಯಾದ ನಹುಷನ ಪ್ರತಿಮೆ ಇದೆ.  " 'ಸರ್ಪ' 'ಸರ್ಪ' ಎಂದೆಡಗಾಲಿನಿಂದಗಸ್ತ್ಯರ ಹೆಗಲು ತಿವಿಯಬೇಕು, ಇಲ್ಲವಾದರೆ ಇಂದ್ರಪದವಿಯೇಕೆ ಬೇಕು?  ಶಚಿಯ ಶುಚಿ ಕೆಡಿಸಿದರೆ ಆಗ ಇದೆ ಮೋಜು. ಸರ್ವಾಧಿಕಾರಿ ನಹುಷನ ರಾಜ್ಯದಲ್ಲಿ ಸಾಮಾನ್ಯರ ಪಾಡೇನು?"

ಕಂಭವೊಡೆಯುವ ವರೆಗೆ, ಕುಂಭ ತುಂಬುವವರೆಗೆ
ಲೆಕ್ಕ ನೂರಕ್ಕೆ ಭರ್ತಿಯಾಗುವತನಕ
ಬೆರ್ನಮ್ ಅರಣ್ಯವೇ ಇದ್ದು ಹೊರಡುವ ತನಕ
ಮೋಹಿನಿಯ ಕೈ ತಲೆಯ ಮುಟ್ಟುವನಕ
ಮಾರುವೇಷಕ್ಕೆ ಹುಡುಕಿರಿ ತೊಗಟೆ, ತೊಗಲುಗಳು.

ಅಂಬೇಡ್ಕರ್ ಮತ್ತು ಗೋಪಾಲಗೌಡರನ್ನು ಅಡಿಗರು ಆಧುನಿಕ ಋಷಿಗಳೆಂದು ಪರಿಗಣಿಸಿ, ಅವರ ಕುರಿತು ಕವನಗಳನ್ನು ಬರೆದಿದ್ದಾರೆ.  ಆದರೆ ಪ್ರಜಾಪ್ರಭುತ್ವದ ಯಶಸ್ಸಿಗೆ ದೊಡ್ಡವರು ಮಾತ್ರವಲ್ಲದೆ, ನಿರಂತರ ಎಚ್ಚರವಿರುವ ಲಕ್ಷಗಟ್ಟಲೆ ನಾಗರಿಕರ ಕೊಡುಗೆಯೂ ಅಗತ್ಯ.  'ದೊಡ್ಡವರ ಸಹವಾಸ' (1988) ಕವನದಲ್ಲಿ ಅಡಿಗರು "ಒಂದಾಲ ಬಲು ದೊಡ್ಡದಾಗಿ ಬೆಳೆದರೆ ಸಾಕೆ?  ತೆಂಗು ಬೇಡವೆ, ಕಂಗು, ತಾಳೆ, ಬಾಳೆ?.... ಯಾವಾಗಲೋ ಬಂದು ಬಡುವುಲ್ಕೆಗಳಿಗಾಗಿ ಲಕ್ಷ ನಕ್ಷತ್ರ ಕಣ್ಣ್ಮುಚ್ಚಬೇಕೆ? "ಎಂದು ಪ್ರಶ್ನಿಸುತ್ತಾರೆ.  'ಅಜ್ಜ ನೆಟ್ಟಾಲ' ಕವನದಲ್ಲಿರುವ 'ಸಾವಿರ ಕಂಬದ ಬಸದಿ' ಪ್ರಜಾಪ್ರಭುತ್ವದ ರೂಪಕವೂ ಆಗಬಹುದು.
ಅಡಿಗರ 'ರಾಮನವಮಿಯ ದಿವಸ'ದ ರಾಮ ಈಗಿನ ಅಯೋಧ್ಯೆಯ, ಮಂದಿರ ಮಸೀದಿ ರಾಜಕೀಯದ ರಾಮ ಅಲ್ಲ.  ಅಡಿಗರ ರಾಮ, ಚಿತ್ತ ಹುತ್ತಗಟ್ಟುವುದರಿಂದ ಸೃಷ್ಟಿಯಾಗುವ ಪುರುಷೋತ್ತಮ ರಾಮ.  ಬಸವಣ್ಣನವರ 'ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ' ಎಂಬ ಮಾತಿನ ಮುಂದುವರಿಕೆಯಾಗಿ ಅಡಿಗರ 'ಚಲನವೇ ಬದುಕು, ನಿಶ್ಚಲವೆ ಮರಣ' ('ಅಗಬೋಟಿ') ಎಂಬ ಸಾಲುಗಳನ್ನು ಮನನ ಮಾಡಬೇಕು.

ಟಿ.ಎಸ್. ಎಲಿಯಟ್ ನಂಬಿದ ದೇವರಿಗೂ, ತನ್ನ ಕಲ್ಪನೆಯ ದೇವರಿಗೂ ಇರುವ ವ್ಯತ್ಯಾಸವನ್ನು ಅಡಿಗರು ಸುಮತೀಂದ್ರ ನಾಡಿಗರಿಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

"The one difference I may point out between my attitude and Eliot's is that he seems to accept too readily the sectarian catholic concept of God, while for me, God is neither a person, nor alien to me.   God is neither in heaven, nor in hell, not even on earth or anywhere.  To me God is implied in everry individual, in everything.".  ಪುರಾಣದ ಪ್ರತಿಮೆಗಳನ್ನು ಕಾವ್ಯದಲ್ಲಿ ಬಳಸಿದ ಅಡಿಗರು ಪುನರತ್ಥಾನವಾದಿಯಾಗಿರಲಿಲ್ಲ.

2

ಅಡಿಗರು ಕಮ್ಯುನಿಸಮ್ ವಿರೋಧಿಯಾಗಿದ್ದರು, ನಿಜ.  ಆಧುನಿಕ ಕನ್ನಡ ಸಾಹಿತ್ಯದಲ್ಲಿ ನಮಗೆ ವೈಚಾರಿಕವಾಗಿ ಮುಖ್ಯರಾಗುವ ಕಾರಂತ, ಕುವೆಂಪು, ಅಡಿಗರು ಈ ಮೂವರೂ ಕಮ್ಯೂನಿಸ್ಟ್ ವಿರೋಧಿಗಳಾಗಿದ್ದರು.  ಇದಕ್ಕೆ ಆ ಕಾಲದ ರಾಜಕೀಯ ಹಿನ್ನೆಲೆಯನ್ನು ಗಮನಿಸಬೇಕು.  ಸೋವಿಯತ್ ರಷ್ಯಾ, ಚೀನಾ ಮತ್ತು ಹತ್ತಾರು ದೇಶಗಳಲ್ಲಿ ಆಗ - 80ರ ದಶಕದ ವರೆಗೆ ಕಮ್ಯೂನಿಸ್ಟರ ಏಕಪಕ್ಷೀಯ ಸರ್ವಾಧಿಕಾರ ಇತ್ತು.  (ಚೀನಾದಲ್ಲಿ ಈಗಲೂ ಇದೆ).  ಭಾರತದಲ್ಲಿ ಮಾತ್ರ 1950ರ ದಶಕದಲ್ಲಿ ಕಮ್ಯೂನಿಷ್ಟರು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡು ಕೇರಳದ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರು.  'ಪಕ್ಷ' ಎಂಬ ಕವನದಲ್ಲಿ ಅಡಿಗರು ಕಮ್ಯೂನಿಷ್ಟರನ್ನು ಗೇಲಿ ಮಾಡುತ್ತಾರೆ.  "ಜಗತ್ತಿನ ಎಲ್ಲ ಹಕ್ಕಿಗಳಿಗೂ ಎಡ ರೆಕ್ಕೆಯಿಂದ ಹಾರುವುದ ಕಲಿಸುತ್ತೇವೆ."

ಸುಮತೀಂದ್ರ ನಾಡಿಗರಿಗೆ ನೀಡಿದ ಸಂದರ್ಶನದಲ್ಲಿ ಅಡಿಗರು "Both leftism and rightism are extremes which exaggerate a particular truth.  I am not a conservative in the sense that I should like to conserve all that has come donw to us." ಎಂದಿದ್ದಾರೆ.

"ನಾನು ನಿನ್ನ ಅಭಿಪ್ರಾಯವನ್ನು ಒಪ್ಪದೆ ಇರಬಹುದು.  ಆದರೆ ಭಿನ್ನಾಭಿಪ್ರಾಯವನ್ನು ಉಳಿಸಿಕೊಳ್ಳುವ ನಿನ್ನ ಅಭಿಪ್ರಾಯವನ್ನು ಉಳಿಸಿಕೊಳ್ಳುವ ನಿನ್ನ ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕಿಗಾಗಿ ನಾನು ನಿರಂತರ ಹೋರಾಡುತ್ತೇನೆ" ಎನ್ನುವುದು ಪ್ರಜಾಪ್ರಭುತ್ವಪರವಾದ ನಿಲುವು.  ಅಡಿಗರಲ್ಲಿ ಇಂಥ ನಿಲುವು ಇತ್ತು.  ಅವರು ತನಗಿಂತ ವಯಸ್ಸಿನಲ್ಲಿ ತುಂಬ ಕಿರಿಯರಾದ ಉಡುಪಿಯ ಎಡಪಂಥೀಯ ವಿಮರ್ಶಕ ಜಿ. ರಾಜಶೇಖರ್‌ರಿಂದತನ್ನ 'ಸುವರ್ಣ ಪುತ್ಥಳಿ' ಸಂಕಲನಕ್ಕೆ ಮುನ್ನುಡಿ ಬರೆಸಿದ್ದೇ ಸಾಕ್ಷಿ. 

ಜಿ. ರಾಜಶೇಖರ್ ತನ್ನ ಮುನ್ನುಡಿಯಲ್ಲಿ ಬರೆದಿರುವಂತೆ, "ಚರಿತ್ರೆ, ಸಮಾಜ ಮತ್ತು ವ್ಯಕ್ತಿಯ ಎಲ್ಲ ಸಂಬಂಧಗಳೂ ರಾಜಕೀಯ ಪ್ರಶ್ನೆಗಳು ಎನ್ನುವ ವಿಶಾಲ ಅರ್ಥದಲ್ಲಂತೂ ಅವರ ಎಲ್ಲ ಪದ್ಯಗಳೂ ರಾಜಕೀಯ ಪದ್ಯಗಳು.  ಆದರೆ ಅವರ ಕಾವ್ಯದ ಈ ವಿಶಾಲ ಅರ್ಥದ ರಾಜಕೀಯಕ್ಕೂ ಅವರ ಸ್ವಘೋಷಿತ ರಾಜಕೀಯ ನಿಲುವುಗಳಿಗೂ ನಡುವೆ ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ.  ಬೇಂದ್ರೆ ತನ್ನ ಕೊನೆಗಾಲದಲ್ಲಿ ಸಾಯಿಬಾಬಾನ ಭಕ್ತರಾಗಿದ್ದರು ಎನ್ನುವುದು ಅವರ 'ಸಣ್ಣ ಸೋಮವಾರ'ದಂತಹ ಪದ್ಯಗಳ ಓದಿಗೆ ಹೇಗೆ ಬಾಧಕವಲ್ಲವೋ ಹಾಗೆಯೇ ಅಡಿಗರ ಪ್ರತಿಗಾಮಿ ರಾಜಕೀಯ ಅವರ ಒಳ್ಳೆಯ ಕವಿತೆಗಳ ಓದಿಗೂ ಬಾಧಕವಲ್ಲ.... ಅವರ ಅತ್ಯುತ್ತಮ ಕಾವ್ಯ ಈ ಪ್ರತಿಗಾಮೀ ರಾಜಕೀಯದ ಅಭಿವ್ಯಕ್ತಿಯಲ್ಲ".

ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ರಾಜಕೀಯದ ಬಗ್ಗೆ ಮೌನವಾಗಿದ್ದ ಹಲವಾರು ಕವಿಗಳಿದ್ದಾರೆ. ಆದರೆ ಕನ್ನಡದಲ್ಲಿ ಕಾರಂತರು, ಅಡಿಗರು, ಅನಂತಮೂರ್ತಿ , ಲಂಕೇಶ್ ಇವರ‍್ಯಾರೂ ರಾಜಕೀಯವನ್ನು ಅಲಕ್ಷಿಸಲಿಲ್ಲ.  ಇದು ನಾವು ಅಭಿಮಾನ ಪಡಬೇಕಾದ ಸಂಗತಿ.  ಪ್ರಜಾಪ್ರಭುತ್ವದ ಸಮರ್ಥನೆಯ ನಡುವೆಯೇ, ನಮ್ಮ ನಡುವೆಯೇ ಮೇಲೆದ್ದು ಬರಬಹುದಾದ ಹಿಟ್ಲರನ ಭಯವೂ ಅಡಿಗರಲ್ಲಿತ್ತು.  ಪ್ರಜಾಪ್ರಭುತ್ವ ಬೇಕಾಗುವುದು 'ಶೇಕಡಾ ಏಳರ' ಮಂದಿಗೆ ಮಾತ್ರವಲ್ಲ, ದುರ್ಬಲ ವರ್ಗಗಳ ಏಳ್ಗೆಗಾಗಿಯೂ ಪ್ರಜಾಪ್ರಭುತ್ವ ಬೇಕು.  ಅಡಿಗರು ಪ್ರಜಾಸತ್ತಾತ್ಮಕ ಆರೋಗ್ಯಶಾಸ್ತ್ರದ ಮೊದಲ ಪಾಠ ಕಲಿಸಿದ, ಜಾತಿ ಆಧಾರಿತ ಅಸಮಾನತೆಯನ್ನು ವಿರೋಧಿಸಿದ ಕವಿ.

3

ಮಿತ್ರ ಕಿ.ರಂ. ನಾಗರಾಜರು ಮತ್ತು ನಾನು ಕುಂದಾಪುರ ತಾಲೂಕಿನ ಮೊಗೇರಿಯಲ್ಲಿ ಅಡಿಗರ ಮನೆ ನೋಡಲು ಒಮ್ಮೆ ಹೋಗಿದ್ದೆವು.  ಅಡಿಗರ ಮನೆಯಲ್ಲಿ ವಾಸವಾಗಿರುವ ಪುರೋಹಿತರು ಮನೆಯನ್ನು ತೋರಿಸಿದರು, ಸತ್ಕರಿಸಿದರು.  ಆಮೇಲೆ ನಾವು ಊಟ ಮಾಡುತ್ತಿದ್ದಾಗ ಮನೆಯ ಯಜಮಾನ ಪುರೋಹಿತರು ನಾಪತ್ತೆಯಾಗಿದ್ದರು.  ಊಟ ಆದ ಮೇಲೆ ವಿಚಾರಿಸಿದಾಗ ಅವರ ಹೆಂಡತಿ ಹೀಗೆಂದರು - "ನೀವು ಬಂದಮೇಲೆ ನಮ್ಮ ಪಕ್ಕದ ಊರಿನ ಪುರೋಹಿತರು ತೀರಿಕೊಂಡ ಸುದ್ದಿ ಬಂತು.  ಅವರ ಶವ ಸಂಸ್ಕಾರಕ್ಕಾಗಿ ಇವರು ಹೋಗಬೇಕಾಯಿತು.  ನಿಮ್ಮ ಊಟಕ್ಕೆ ತೊಂದರೆ ಆಗಬಾರದೆಂದು ನಿಮಗೆ ಹೇಳದೆ ಹೋದರು".  ಈ ಮಾತುಗಳನ್ನು ಕೇಳುತ್ತಿದ್ದಂತೆ ಅಡಿಗರ 'ಭೂಮಿಗೀತ'ದ ಧ್ವನಿಪೂರ್ಣ ಸಾಲುಗಳು ನನಗೆ ನೆನಪಾದುವು.  ಪಂಪನ ಕಾವ್ಯದ ಧ್ವನಿಶಕ್ತಿಗೆ ಸರಿಮಿಗಿಲೆನಿಸುವ ಧ್ವನಿಶಕ್ತಿ ಅಡಿಗರ ಕಾವ್ಯದಲ್ಲಿದೆ -

ನರ್ಸುಗಳು ಡಾಕ್ಟರರು ಹೆರಿಗೆ ಮನೆಗೊಳ ಹೊರಗೆ
ಅವರ ಬೆನ್ನಿಗೆ ಸದಾ ನಾಕು ಮಂದಿ
ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬ ಅಗ್ಗ
ಜಾತಕರ್ಮದಿ ನಿರತ ಈ ಪುರೋಹಿತ ಭಟ್ಟ
ಅದರ ಪ್ರಯೋಗದಲಿ ಪಾರಂಗತ.

 "ಬದುಕಬಯಸುವ ಮೊಳಕೆ, ಹೀಚುಮರಿಗಳ ಸುತ್ತ ಮುಳ್ಳು ಕಂಟೆಯ ಬೇಲಿ ಕಟ್ಟಿ ಆರೈಯುವುದು, ಮಂಜು ಮಬ್ಬಿನ ಮಧ್ಯೆ ಬಿದ್ದ ಕಣ್ಣನೆತ್ತಿ ಶಿಖರಗಳ ಮತ್ತೊಮ್ಮೆ ಗುರುತಿಸುವುದು ನಮ್ಮ ಕರ್ತವ್ಯ" ಎಂದು ಅಡಿಗರು ನಂಬಿದ್ದರು.

 ನಾಲ್ಕುನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳುಭಾಗವಹಿಸಿದ ಈ 'ಅಡಿಗ ಕಾವ್ಯ ಅನುಸಂಧಾನ'ವನ್ನು ಯಶಸ್ವಿಯಾಗಿ ಏರ್ಪಡಿಸಿದ ಪ್ರಿನ್ಸಿಪಾಲ್ ಪ್ರೊ| ರಾಧಾಕೃಷ್ಣರಿಗೆ, ಸಂಯೋಜಿಸಿದ ಶ್ರೀಮತಿ ವತ್ಸಲ ಮೋಹನ್, ಶ್ರೀಮತಿ ವಿಶಾಲ, ಶ್ರೀಮತಿ ಸುಷ್ಮಾರಿಗೆ ನನ್ನ ಅಭಿನಂದನೆಗಳು.


ಗೋಪಾಲಕೃಷ್ಣ ಅಡಿಗ ಸಂಸ್ಕೃತಿ ಅನುಸಂಧಾನ (2005)
ಪ್ರಧಾನ ಸಂಪಾದಕರು - ಪ್ರೊ| ಕೆ.ಇ. ರಾಧಾಕೃಷ್ಣ
ಸಂಪಾದಕರು - ವತ್ಸಲಾ ಮೋಹನ್, ವಿಶಾಲ, ನುಗ್ಗನಹಳ್ಳಿ ಷಡಕ್ಷರಿ
ಪ್ರ - ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
 

1 comment: