stat Counter



Monday, December 20, 2010

U R Ananthamurthy - collection of poems

ಯು. ಆರ್. ಅನಂತಮೂರ್ತಿ
(
ಕವನ ಸಂಕಲನಗಳು)

- ಮುರಳೀಧರ ಉಪಾಧ್ಯ ಹಿರಿಯಡಕ
-
1963ರಲ್ಲಿ ಪ್ರಕಟವಾದ ಅನಂತಮೂರ್ತಿಯವರ 'ಬಾವಲಿ' ಕವನಸಂಕಲನದಲ್ಲಿ ಹತ್ತು ಕವನಗಳಿವೆ. ಐದು ಹೊಸ ಕವನಗಳೊಂದಿಗೆ ಸಂಕಲನದ ಪರಿವರ್ಧಿತ ಆವೃತ್ತಿ 1970ರಲ್ಲಿ '15 ಪದ್ಯಗಳು' ಎಂಬ ಹೆಸರಿನಲ್ಲಿ ಪ್ರಕಟವಾಯಿತು. 1989ರಲ್ಲಿ ಪ್ರಕಟವಾದ 'ಅಜ್ಜನ ಹೆಗಲ ಸುಕ್ಕುಗಳು' ಸಂಕಲನದಲ್ಲಿ ಮೂವತ್ತಾರು ಕವನಗಳಿವೆ. 'ಆಯೋವಾದಲ್ಲಿದ್ದಾಗ ಕೆಲವು ದಿನ, ಕೊಟ್ಟಾಯಂನಲ್ಲಿ ಸುಮಾರು ಮೂರು ತಿಂಗಳ ಕಾಲ ಪ್ರತಿದಿನ ನನ್ನನ್ನು ಕಾಡಿದ ಹಿಡಿದಿಟ್ಟ ಕೆಲವು ರಚನೆಗಳು ಇಲ್ಲಿವೆ ಎಂದು ಅನಂತಮೂರ್ತಿಯವರು ಸಂಕಲನದ ಮುನ್ನುಡಿಯಲ್ಲಿ ಬರೆದಿದ್ದಾರೆ. ನಲುವತ್ತೆರಡು ಕವನಗಳಿರುವ 'ಮಿಥುನ' ಸಂಕಲನ 1992ರಲ್ಲಿ ಪ್ರಕಟವಾಗಿವೆ. ನಾಲ್ಕು ಸಂಕಲನಗಳಲ್ಲಿ ಲಭ್ಯವಿರುವ ಅನಂತಮೂರ್ತಿಯವರ ಕವನಗಳ ಒಟ್ಟು ಸಂಖ್ಯೆ - ತೊಂಬತ್ತಮೂರು. ಕವಿತೆ ನನ್ನ ಪಾಲಿಗೆ ಕೆಲವು ಕಾಲ ಹಿಡಿದಿಟ್ಟು, ಬಿಟ್ಟು ಮತ್ತೆ ಬರಬಹುದಾದ್ದು. ಐವತ್ತರ ದಶಕದಲ್ಲಿ ಕವಿತೆಯ ಗುಂಗಿನಲ್ಲಿದ್ದವ ಕಥೆಗಾರನಾದೆ. ಆದರೆ ಕಥೆಗಳಲ್ಲೂ ಕಾದಂಬರಿಯಲ್ಲೂ ಕವಿತೆಯನ್ನೇ ಬರೆದೆ. ನನ್ನ ಚಿಂತನೆಗಳೊ ಶಾಸ್ತ್ರದ ಶಿಸ್ತಿನವನದಲ್ಲ - ಕಾವ್ಯಕ್ಕೆ ಒಲಿದ ಮನಸ್ಸಿನವನದು. ಇದು ಹೆಚ್ಚುಗಾರಿಕೆಯ ಮಾತೂ ಅಲ್ಲ - ಅದು ನಾನಿರುವ ಅವಸ್ಥೆಯೆಂದು ನನ್ನ ಓದುಗರಿಗೆ ನಿವೇದಿಸುತ್ತಿದ್ದೇನೆ. ಹೀಗೆ ಕಾವ್ಯ ನನ್ನ ಭಾವವನ್ನೂ, ವಿಚಾರವನ್ನೂ ಸದಾ ನಿರ್ದೇಶಿಸುತ್ತಿದ್ದು ತನ್ನ ಶುದ್ಧ ಸ್ವರೂಪದಲ್ಲಿ ನನ್ನಿಂದ ಆಗಾಗ ಬರೆಸಿಕೊಳ್ಳುವುದಿದೆ ಎಂಬುದಾಗಿ ಅನಂತಮೂರ್ತಿಯವರು 'ಅಜ್ಜನ ಹೆಗಲ ಸುಕ್ಕುಗಳು' ಸಂಕಲನದ 'ಮೊದಲ ಮಾತಿ'ನಲ್ಲಿ ಬರೆದಿದ್ದಾರೆ.
'ಅಜ್ಜನ ಹೆಗಲ ಸುಕ್ಕುಗಳು'
ಎಚ್.ಎಸ್. ವೆಂಕಟೇಶಮೂರ್ತಿಯವರು 'ಅಜ್ಜನ ಹೆಗಲ ಸುಕ್ಕುಗಳು' ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ 'ಮತ್ಸ್ಯಾವತಾರ', 'ರಾಮನೋ-ಕೃಷ್ಣನೋ', 'ಗುರುರಾಯ', ' ನಮ್ಮ ವಿನಯ', 'ಭಕ್ತಿ-ವಿಭಕ್ತಿ, 'ವಾಸನಾ', 'ಜೈಲಿಂದ ವರವರ ರಾವ್ ಬರೆದ ಕಾಗದ ಓದಿ' ಮತ್ತಿತರ ಕವನಗಳನ್ನು ಚರ್ಚಿಸಿದ್ದಾರೆ.
ಡಾ| ಜಿ. ಎಸ್. ಅಮೂರ ಅವರು ಬರೆದಿರುವಂತೆ, ಅನಂತಮೂರ್ತಿಯವರ ಕಾವ್ಯದಲ್ಲಿ ದ್ವಂದ್ವದ ಅನುಭವ ಸಾಮಾಜಿಕ ಮತ್ತು ವೈಯಕ್ತಿಕ ಕ್ಷೇತ್ರಗಳೆರಡನ್ನೂ ಒಳಗೊಳ್ಳುವಷ್ಟು ವ್ಯಾಪಕವಾಗಿದೆ. ನೆಹರೂ-ಗಾಂಧಿ, ರಮಣ-ಪಿಕಾಸೊ, ರಾಮ-ಕೃಷ್ಣ, ವ್ಯಾಸ-ಶುಕ, ತೊಡೆ-ಹೃದಯ, ಭಕ್ತಿ-ವಿಭಕ್ತಿ, ಕ್ರಿಯೆ-ನಿಷ್ಕ್ರಿಯೆ, ಅರ್ಪಣೆ-ಲೋಭ, ಯೋಗಿ-ವ್ಯಭಿಚಾರಿ, ವ್ಯವಸ್ಥೆ-ಅರಾಜಕತೆ - ಹೀಗೆ ದ್ವಂದ್ವಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂಥ ದ್ವಂದ್ವ ಕೇಂದ್ರಿತ ಕವಿತೆಗಳಲ್ಲದೆ ಇನ್ನೆಡು ರೀತಿಯ ಕವಿತೆಗಳೂ ಅನಂತಮೂರ್ತಿಯವರ ಸಂಗ್ರಹದಲ್ಲಿವೆ. 'ಕಲಿಯಬೇಕಿನ್ನು', ' ನಿಮ್ಮ ವಿನಯ', 'ಪ್ರೀತಿ', 'ಐರ್ಲೆಂಡಿನ ಚ್ಯವನಋಷಿಗೆ' ಇಂಥ ಕವನಗಳಲ್ಲಿ ನೈಜ ಒಪ್ಪಿಗೆಯ ಧ್ವನಿ ಇದ್ದರೆ, ' ಶಯ್ಯೆ', 'ಶಬ್ದಸೂಚಕ', 'ತಲೆಬುಡ', 'ಹೊಟ್ಟೆ' ಮೊದಲಾದ ಕವಿತೆಗಳಲ್ಲಿ ಮಿತಿಗಳನ್ನು ಗುರುತಿಸುವ ಅರ್ಥಕ್ರಿಯೆ ನಡೆಯುತ್ತದೆ. ಅನಂತಮೂರ್ತಿಯವರ ಕೆಲವು ಕವನಗಳಲ್ಲಿ ಗದ್ಯಸ್ಪರ್ಶ ಜಾಸ್ತಿ ಅನ್ನಿಸುತ್ತದೆ. ಇಂಥ ಕವನಗಳನ್ನು ಅಮೂರ್," ...... ಆದರೆ 'ಭಕ್ತಿ-ವಿಭಕ್ತಿ', 'ಗುರುರಾಯ' ಮೊದಲಾದ ರಚನೆಗಳಲ್ಲಿ ಯಾವ ಪೂರ್ವಸೂಚನೆಯೂ ಇಲ್ಲದೆ ಗದ್ಯ ನುಸುಳಿಕೊಳ್ಳವುದು ಗೊಂದಲವನ್ನುಂಟುಮಾಡುತ್ತದೆ. ತಮ್ಮ ಕವಿತೆಯೊಂದರಲ್ಲಿ ಜಕಣಾಚಾರಿ ಉಳಿಯನ್ನು ಮೇಲಕ್ಕೆಸೆದು ಮುಕ್ಕುಗೊಳಿಸಿ ಉಳಿಸಿಕೊಂಡಂತೆ ಅನಂತಮೂರ್ತಿಯವರು ಕಾವ್ಯದ ಭಾಷೆಯನ್ನು ಬೇಕೆಂದೇ ಮುಕ್ಕುಗೊಳಿಸುತ್ತಿರಬಹುದು. ಆದರೆ ಇಂಥ ಪ್ರಯೋಗಗಳ ಹಿಂದಿನ ತರ್ಕ ಓದುಗನಿಗೆ ಸಿಗುವುದಿಲ್ಲ" ಎನ್ನುತ್ತಾರೆ.
'ಭಕ್ತಿ', 'ರಾಮನೋ-ಕೃಷ್ಣನೋ', 'ಗುರುರಾಯ' ಕವನಗಳನ್ನು ಕುರಿತು ಟಿ.ಪಿ. ಅಶೋಕ್ " ರೀತಿಯ ಕವನಗಳು ಅನಂತಮೂರ್ತಿಯವರ ಪ್ರಬಂಧಗಳಿಗೆ ಹೆಚ್ಚು ಹತ್ತಿರವಾದ ರಚನೆಗಳು. ಪ್ರಬಂಧಗಳಲ್ಲಿ ಸಾಧ್ಯವಾಗುವ ವ್ಯಾಪಕ ಹರಹು, ಕಾವ್ಯ ಮಾತ್ರ ಉಳಿಸಿಕೊಳ್ಳಬಹುದಾದ ನಿಗೂಢ ಸೂಕ್ಷ್ಮಗಳನ್ನು ಇಲ್ಲಿಗೆ ಒಟ್ಟಿಗೇ ಬೆಸೆಯಲು ಲೇಖಕರು ಪ್ರಯತ್ನಿಸಿದ್ದಾರೆ" ಎನ್ನುತ್ತಾರೆ.
ಎಚ್. ಪಟ್ಟಾಭಿರಾಮ ಸೋಮಯಾಜಿಯವರು 'ಐರ್ಲೆಂಡಿನ ಚ್ಯವನಋಷಿಗೆ' ಎಂಬ ಕವನವನ್ನು ಈ ಸಂಕಲನದ ಆಶಯ ಕವನವೆಂದು ಪರಿಗಣಿಸುತ್ತಾರೆ -" 'ಐರ್ಲೆಂಡಿನ ಚ್ಯವನಋಷಿಗೆ' ಯೇಟ್ಸ್ ನನ್ನು ಕುರಿತ ಕವನದಲ್ಲಿ ಅನಂತಮೂರ್ತಿಯವರ ಚಿಂತನೆಗಳ ಒತ್ತು ಯಾವ ಕಡೆಗಿದೆ ಎಂಬುದು ಸ್ಪಷ್ಟವಾಗಿ ಕಾಣತ್ತದೆ. ಇದು ಸಂಕಲನದ ಕೇಂದ್ರದಲ್ಲಿರುವ ಆಶಯ ಕವನಎನ್ನಬಹುದು. ನೋಡುವ ಕ್ರಮಗಳು ಜೀವನದೃಷ್ಟಿಯ ಸಾವಯವ ಸ್ವರೂಪಗಳಾಗಿರುವುದರಿಂದ ಕವನದಲ್ಲಿ ಅನಂತಮೂರ್ತಿ ಯೇಟ್ಸ್‌ನನ್ನು ಕಾಣುವ ಕ್ರಮ ಕೇವಲ ಯೇಟ್ಸ್‌ನನ್ನು ಕಾಣುವ ಕ್ರಮ ಮಾತ್ರವೇ ಅಲ್ಲ, ಸಂಸಾರ, ಪಾಲನೆ, ಜೀವನಪ್ರೀತಿ, ಜೀವನದ ಜಂಜಡ ಮತ್ತು ವೈಭವ, ಬದುಕುವ ಒಳದಾರಿಗಳು, ಇಹ, ಐಹಿಕ, ದೈನಿಕಗಳ ಮೇಲೆ ವ್ಯಾಮೋಹದಿಂದ ಒತ್ತುಕೊಡಲು ಬಯಸುವ, ಸಂಕಲನದುದ್ದಕ್ಕೂ ಕಂಡುಬರುವ, ಅವರ ದೃಷ್ಟಿಕೋನ, ತರ್ಕದ ಬಿಗಿಯನ್ನು, ಶಠತ್ವ, ಸೆಟೆತಗಳನ್ನು, ಘನತೆಯ ಭಾರವನ್ನು ಅನುಮಾನದಿಂದ ನೋಡುವಂಥಾದ್ದರಿಂದ, ತಾನು ಕೊಡುವ ಎಲ್ಲ ಹೇಳಿಕೆಗಳನ್ನು, ಅದರ ಪ್ರತಿಹೇಳಿಕೆಗಳ ಸಾಧ್ಯತೆಯಲ್ಲಿ ಧ್ಯಾನಿಸುತ್ತ ತನ್ನ 'ಕಲಿಯಬೇಕಿನ್ನು' ಎಂಬ ನಿಲುವಿನಿಂದ ಮುಂದುವರಿಯುತ್ತದೆ". ಅವರೆನ್ನುವಂತೆ, "ಗ್ರಹಿಕೆಯಲ್ಲಿ ಬಹುರೂಪಣೆ ಸಾಧ್ಯ ಮತ್ತು ಸಾಧು ಎಂಬ ನಿಲುವು ಕಾವ್ಯಚಿಂತನೆಯ ನಿಯಂತ್ರಕಗಳಾಗಿ ಕೆಲಸಮಾಡಬೇಕೆನ್ನುವ ಪೂರ್ವನಿರ್ಧಾರಿತ ಘೋಷಣೆಗಳನ್ನು ಅವರ ಕವನಗಳು ಮಾಡುತ್ತಿವೆ. ಆದರೆ ಇಂಥ ನಿಲುವುಗಳು ಕವನಗಳ ಹಿನ್ನೆಲೆಯಲ್ಲಿ ಇವೆ ಎಂಬುದೇ ಕಾವ್ಯಾಭಿವ್ಯಕ್ತಿಯನ್ನು ಬಂಧಿಸುತ್ತಿವೆ ಎಂಬುದೇ ಸಂಕಲನದ ಮಿತಿಯೂ ಕೂಡ.

ಜೈಲಿಂದ ವರವರ ರಾವ್ ಬರೆದ ಕಾಗದ ಓದಿ' ಎಂಬ ಕವನದ ಕುರಿತು ವಿಮರ್ಶಕ ಜಿ. ರಾಜಶೇಖರ್ 'ಪದ್ಯ ಒಂದರ ಕುರಿತು ಭಿನ್ನಮತ' ಎಂಬ ಸುದೀರ್ಘ ಲೇಖನ ಬರೆದಿದ್ದಾರೆ. ಕವಿತೆಯಲ್ಲಿ ಅಭಿವ್ಯಕ್ತಗೊಂಡಿರುವ ಅನಂತಮೂರ್ತಿಯವರ ಸ್ವಾತಂತ್ರ್ಯ ಮತ್ತು ಸಫಲತೆಗಳ ಪರಿಕಲ್ಪನೆಗಳನ್ನು ರಾಜಶೇಖರ್ ಪ್ರಶ್ನಿಸುತ್ತಾರೆ; "ವರವರ ರಾವ್ ಅವರ ವ್ಯಕ್ತಿತ್ವದ ನೈತಿಕ ಆಯಾಮವೇ ಅನಂತಮೂರ್ತಿಯವರ ಕವಿತೆಗೆ ದಕ್ಕದೆ ಹೋಗಿದೆ. ಕವಿತೆಯ ತಾತ್ವಿಕ ನೆಲೆಗಳು ಪ್ರಶ್ನಾರ್ಹವಾಗಿವೆ. ಚರಿತ್ರೆಯ ಕ್ರಾಂತಿಗೆ ಬದ್ಧನಾಗಿದ್ದ ಒಣ ಹಠದ ವರವರ ರಾವ್ ಈಗ ನಿರಂತರವಾದ ಋತುಕ್ರಾಂತಿಗೆ ಕಣ್ಣುತೆರೆದ ಸೂಕ್ಷ್ಮಜ್ಞ ಎಂಬ ಕವಿತೆಯ ತೀರ್ಮಾನವೂ ಅಷ್ಟೇ ಪ್ರಶ್ನಾರ್ಹವಾಗಿದೆ" ಎನ್ನುತ್ತಾರೆ. ಅನಂತಮೂರ್ತಿಯವರ ಕವನವನ್ನು ರಾಜಶೇಖರ್, .ಕೆ. ರಾಮಾನುಜನ್‍ರ ಹೋ.ಚಿ. ಮಿನ್ಹ್ ಕುರಿತ, ಕೆ.ವಿ. ತಿರುಮಲೇಶರ ಚೆಗವಾರ ಕುರಿತ ಉತ್ತಮ ಕವನಗಳೊಂದಿಗೆ ಹೋಲಿಸುತ್ತಾರೆ.

'ಮಿಥುನ'
ಎಚ್. ಎಸ್. ವೆಂಕಟೇಶಮೂರ್ತಿಯವರು ತನ್ನ ವಿಮರ್ಶೆಯಲ್ಲಿ 'ಚರಿತ್ರೆ ಮತ್ತು ಜಿಪ್ಸಿ', 'ಮಿಲಾನ್ ಕುಂದೇರ ಹೇಳಿದ ಕಥೆ', 'ದಲೈಲಾಮ ಮತ್ತು ಚರಿತ್ರೆ', 'ಕುಮಾರಗಂಧರ್ವ', 'ಮಹಾಮಾಯೆ' - ಇವು ಸಂಕಲನದ ಮುಖ್ಯ ಕವನಗಳೆಂದು ಗುರುತಿಸಿದ್ದಾರೆ. 'ಕೇವಲ ಸಾಕ್ಷಿಯಾಗಿ ಬಿಟ್ಟ ಕವಿಯೊಬ್ಬನ ಕಥೆ', 'ಮಯೂರ', 'ಸಿಟ್ಟು ಮತ್ತು ಸೋಲು' ಕವಿತೆಗಳನ್ನು ಅವರು ಚರ್ಚಿಸಿದ್ದಾರೆ. ಅವರು ಬರೆದಿರುವಂತೆ," 'ಮಿಥುನ' ರಚನೆಗಳದ್ದು ಹಿಡಿದೆಳೆಯುವ ಚುಂಬಕ ಶಕ್ತಿಯಲ್ಲ. ತೊಡಗಿದಾಗ ಮಾತ್ರ ಅವು ತೊಡಗಿಸಿಕೊಳ್ಳುತ್ತವೆ. ಹೇಳುವ ರೀತಿಗಿಂತ ಹೇಳುವ ಸಂಗತಿಯ ಸೂಕ್ಷ್ಮತೆ ನಮ್ಮನ್ನು ಆಕರ್ಷಿಸುತ್ತದೆ. ಕಾವ್ಯದ ಭಾಷೆ, ಲಯ, ವಸ್ತುಪ್ರಪಂಚ ಇಲ್ಲಿ ಮುಕ್ತವಾದುದಾಗಿದೆ. ಜಾಳಾಗುವಿಕೆಯಿಂದ 'ರಚನಾಶೀಲ'ವಾದ ಕವಿತೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? ಎಂಬುದೇ ಮಾರ್ಗದ ಕವಿಗಳು ಮುಖ್ಯವಾಗಿ ಎದುರಿಸಬೇಕಾಗುವ ಪ್ರಶ್ನೆ."

" 'ಮಿಥುನ' ಕವನ ಸಂಕಲನವು ಕಾವ್ಯದ ಬಗೆಗೆ ನಮಗಿರುವ ಕಲ್ಪನೆಗಳ ಮೇರೆಯನ್ನು ಪಲ್ಲಟಗೊಳಿಸುತ್ತದೆ ಎನ್ನುತ್ತಾರೆ ಕಿ. ರಂ. ನಾಗರಾಜ್. ಅವರು ಬರೆದಿರುವಂತೆ, ಒಂದು ನಿರ್ದಿಷ್ಟ ಚಿಂತನೆಗೆ ಕಾವ್ಯರೂಪವನ್ನು ಪ್ರದಾನ ಮಾಡುವುದಕ್ಕೂ, ತನ್ನ ಅನುಭವಲೋಕದಿಂದ ಬಂದ ಚಿಂತನಶೀಲತೆಗೂ ಸಾಕಷ್ಟು ಅಂತರವಿದೆ. ಅನಂತಮೂರ್ತಿಯವರು ಎರಡನೆಯ ಕ್ರಮಕ್ಕೆ ವಿಶೇಷವಾಗಿ ಒಲಿದವರು. ಗಾಂಧಿವಾದ,ಮಾರ್ಕ್ಸ್‌ವಾದ, ಲೋಹಿಯಾ ಚಿಂತನೆಗಳು, ಭಕ್ತಿ, ಅನುಭಾವ, ಕಾಮ, ಪ್ರೇಮ, ಜಾತಿ, ಧರ್ಮ, ಚರಿತ್ರೆ, ಸಂಸ್ಕೃತಿಯ ಒಳಗಿನ ನಂಬಿಕೆ-ಅಪನಂಬಿಕೆಗಳು ಇವು ಅನಂತಮೂರ್ತಿಯವರ ಪ್ರಧಾನ ಶೋಧನಾ ವಲಯ. ಶೋಧನೆಯ ವಿಭಿನ್ನ ಪ್ರಕ್ರಿಯೆ ಇಲ್ಲಿ ಕಾವ್ಯವಾಗುತ್ತಿದೆ.

ನಮ್ಮ ಸಮಕಾಲೀನ ಸಾಹಿತ್ಯ ಸಂದರ್ಭ ಎದುರಿಸುತ್ತಿರುವ ಮುಖ್ಯ ಬಿಕ್ಕಟ್ಟುಗಳು ಹಾಗೂ ಸವಾಲುಗಳು ಇಲ್ಲಿಯ ಅನೇಕ ಕವಿತೆಗಳಲ್ಲಿ ಚಿಂತನೆಗೆ ಗುರಿಯಾಗಿವೆ. ಇದಕ್ಕೆ 'ಈಚಿನ ನಮ್ಮ ಕವಿತೆ' ಎಂಬ ಕವಿತೆಯನ್ನೇ ನೋಡಬಹುದು. ನಮ್ಮ ಕಾವ್ಯ ಕೆಲವೊಮ್ಮೆ ಪಡೆಯುವ ಎಚ್ಚರ, ಮತ್ತೆ ಅದು ಕಳೆದುಕೊಳ್ಳುತ್ತಿರುವ ಸೂಕ್ಷ್ಮತೆ ಇವುಗಳ ಬಗೆಗೆ ಕವಿತೆ ಹೇಳುತ್ತದೆ. ಕಾವ್ಯಪ್ರಪಂಚದಲ್ಲಿ ಮೊಳಗುವ ಘೋಷಣೆಗಳಿಗೂ, ಅಭಿವ್ಯಕ್ತಿಗೂ ಇರುವ ಅಂತರ ತುಂಬ ಗಂಭೀರವಾದದ್ದು. ಅಂಥ ಸಮಸ್ಯೆಯನ್ನು ಚಿಕ್ಕ ಕವನ ವಿವೇಚನೆಗೆ ಒಳಗುಮಾಡಿದೆ. ಇಲ್ಲಿಯ ಬಹುತೇಕ ಕವಿತೆಗಳಿಗೆ ಹಾಗೆ ನೋಡಿದರೆ ಒಂದು ಮುಕ್ತಾಯವೆಂಬುದಿಲ್ಲ. ಒಂದು ಕವಿತೆ ಮತ್ತೊಂದು ಕವಿತೆಯಲ್ಲಿ ಬೆಳೆಯುತ್ತ ಮುಂದುವರಿಯುವಂಥದ್ದು.

ಎರಡು ಸಂಗತಿಗಳ ಮಧ್ಯೆ ವಿಭಿನ್ನ ಅನುಭವಗಳ ಮಧ್ಯೆ ಗೋಚರಗೊಳ್ಳುವ ವಿಶಿಷ್ಟ ಹೊಳವುಗಳ ಮೂಲಕ ಕವಿತೆ ಸಾಕ್ಷಾತ್ಕಾರಗೊಳ್ಳುವ ಕ್ರಮ ಕವನಗಳ ವಿಶಿಷ್ಟತೆಯಾಗಿದೆ. 'ಡಯಲೆಕ್ಟಿಕ್ಸ್‌ನ ಹೆಗೆಲ್ ಮತ್ತು ನಿತ್ಯಭಿಕ್ಷೆಯ ಪುರಂದರ', 'ರಿಲ್ಕ್ ಕಂಡ (ಕಾಣದ) ಬೆಕ್ಕು, 'ಕುಮಾರ ಗಂಧರ್ವ', 'ಸೋವಿಯತ್ ರಶ್ಯಾ' ಇಂಥ ಕವಿತೆಗಳಲ್ಲಿ ಮೇಲೆ ಹೇಳಿದ ಅಂಶಗಳನ್ನು ಕಾಣಬಹುದಾಗಿದೆ.
ಇಲ್ಲಿಯ ಬಹುತೇಕ ಕವಿತೆಗಳು ರಾಜಕಾರಣದ ನೆಲೆಗಳನ್ನು ವಿಮರ್ಶೆಗೆ ವಿಶ್ಲೇಷಣೆಗೆ ಗುರಿಪಡಿಸುತ್ತವೆ. ವಸಾಹತುಶಾಹಿ ಅನುಭವಗಳಿಗೆ ಪ್ರತಿಕ್ರಿಯೆ ತೋರುವ ದೃಷ್ಟಿಕೋನ, ಭಾರತೀಯ-ಪಾಶ್ಚಾತ್ಯ ಅನುಭವಗಳ ಮಧ್ಯೆ ಹುಟ್ಟುವ ಅನೇಕ ತುಡಿತಗಳು, ಮನುಷ್ಯ ದೈನಿಕಗಳು ಶಕ್ತಿರಾಜಕಾರಣ ಇವುಗಳ ದ್ವಂದ್ವ ಹೀಗೆ ರಾಜಕಾರಣದ ಒಳ ಸುಳಿಗಳನ್ನು ಶೋಧಿಸುವ ಬಗೆ ಸಂಕಲನದ ವಿಶಿಷ್ಟ ಧ್ವನಿಯಾಗಿದೆ.
ಇಲ್ಲಿ ಮಹತ್ವದ ಕವಿತಗೆಗಳೊಂದಿಗೆ ಕೇವಲ ನಿರೂಪಣೆಯ ಹಂತದಲ್ಲೇ ನಿಂತುಬಿಡುವ ಅನೇಕ ಪದ್ಯಗಳೂ ಇವೆ. ಸಂಗತಿಯನ್ನು ನಿರೂಪಿಸುವ ಹಂತಕಷ್ಟೇ ನಿಂತು ಹೆಚ್ಚಿನ ಕ್ರಿಯಾಶೀಲತೆಯನ್ನು ಪಡೆಯದೆ ಹೋಗುವುದನ್ನು ಇಂಥ ರಚನೆಗಳಲ್ಲಿ ಕಾಣುತ್ತೇವೆ. 'ದೇವಾನಾಂಪ್ರಿಯ' 'ರಾಮಾನುಜನ್ ಕವಿತೆ ಓದಿ' ಇಂಥ ಕವಿತೆಗಳನ್ನು ಗುಂಪಿಗೆ ಸೇರಿಸಬಹುದು.
ಕವಿತೆಯ ಮೈಯಲ್ಲೇ ವಿಚಾರ, ಚಿಂತನೆ ಒಡಮೂಡಿದಾಗ, ಸಫಲವಾಗುವ ರಚನೆಗಳು ಸಾಕಷ್ಟು ಪ್ರಮಾಣದಲ್ಲಿ ಸಂಕಲನದಲ್ಲಿವೆ. ವಿಚಾರವೊಂದಕ್ಕೆ ಕವನದ ರೂಪವನ್ನು ತೊಡಿಸಿದಾಗ ಅದು ಜಾಣ್ಮೆ ಮಾತ್ರವಾಗಿ ಉಳಿದುಬಿಡುತ್ತದೆ. ಎರಡು ತುದಿಗಳ ನಡುವೆ 'ಮಿಥುನ' ಸಂಕಲನದ ಮಹತ್ವವಿದೆ. ಇವೆಲ್ಲದರ ಮಧ್ಯೆಯೂ ಹೇಳಬೇಕಾದ ಮಾತೆಂದರೆ ಸಮಕಾಲೀನ ಜರೂರು ಎಲ್ಲ ಕವನಗಳ ಹಿಂದೆ ದಟ್ಟವಾಗಿ ಹಬ್ಬಿಕೊಂಡಿದೆ.
'ಟೂರಿಸ್ಟರ ಕೇರಳ' ಕವಿತೆಯಲ್ಲಿರುವ ಶ್ಲೇಷೆಯನ್ನು ಬಿ. ಜನಾರ್ದನ ಭಟ್ ಹೀಗೆ ಗುರುತಿಸುತ್ತಾರೆ -
"ಇಂಥ ಋತುಗೆ ಇದೇ ಕುಣಿತ
ಕಾಲಕಿಂಥ ಕಟ್ಟಳೆ
ನಂಬಲೇನು ಟೂರಿಸ್ಟರು
ದೇಶದ ಬಡವರೆ?"
ಎಂದು ಪ್ರಾರಂಭವಾಗುವ 'ಟೂರಿಸ್ಟರ ಕೇರಳ' ಕವನದಲ್ಲಿ ಶ್ಲೇಷಾರ್ಥವುಳ್ಳ ಪ್ರಯೋಗಗಳಿವೆ."ನಡುರಾತ್ರಿಯ ವನದ ದುರ್ಗ" ಎಂಬ ಸಾಲಿನ ನಂತರ, 'ಈಗ ಬರೀ ರಬ್ಬರು | ಬೆಳೆಯದವರಿಗರಬ್ಬರು' ಸಾಲುಗಳು ಬರುತ್ತವೆ. ಸಾಲುಗಳ ಹಿಂದಿನ ಸಾಲುಗಳು ಸ್ತ್ರೀಸಂಬಂಧಿಯಾದ್ದರಿಂದ 'ಈಗ ಬರೀ ರಬ್ಬರು' ಎನ್ನುವುದು ನೇರ ಅರ್ಥದಲ್ಲಿ 'ಕೇರಳದಲ್ಲೀಗ ಬರೀ ರಬ್ಬರು ಬೆಳೆಯುತ್ತಾರೆ' ಎಂದೂ ವಕ್ರ ಅರ್ಥದಲ್ಲಿ ಹೆಣ್ಣುಗಳು ಈಗ ಸ್ಪಂದನರಹಿತರಾಗಿ ಬರೀ ರಬ್ಬರಿನ ಗೊಂಬೆಗಳಂತೆ ಎಂದೂ ಆಗುತ್ತದೆ. 'ಬೆಳೆಯದವರಿಗರಬ್ಬರು' ಎನ್ನುವಲ್ಲಿ 'ರಬ್ಬರು ಬೆಳೆಯದವರು ಅರಬ್ ರಾಷ್ಟ್ರಗಳಿಗೆ ಹೋಗುತ್ತಾರೆ ಎಂದೂ, ಬೆಳೆಯದ (ಎಳೆಯ) ಹೆಣ್ಣುಮಕ್ಕಳಿಗೆ ಅರಬ್ಬರು ಎಂದೂ ಅರ್ಥಗಳಾಗುತ್ತವೆ. ಎರಡು ಸಾಲುಗಳಲ್ಲಿ ಕೇರಳದ ಕೆಲವು ಮುಖಗಳನ್ನು ಕಾಣಿಸಿಬಿಡುವ ಚಮತ್ಕಾರ ಇದೆ."
"ದಾವ್‍ದ ಜಿಂಗ್"
ಡಾ| ಯು. ಆರ್. ಅನಂತಮೂರ್ತಿಯವರು ಅನುವಾದಿಸಿದ ಲಾವ್‍ತ್ಸುನ "ದಾವ್‍ದ ಜಿಂಗ್" (ಪಥಧರ್ಮಸೂತ್ರ) 1994ರಲ್ಲಿ ಪ್ರಕಟವಾಗಿದೆ. ಎಸ್. ಮಂಜುನಾಥರ 'ಸುಮ್ಮನಿರುವ ಸುಮ್ಮಾನ' ಅನಂತಮೂರ್ತಿಯವರಿಗೆ ಪ್ರೇರಣೆ ನೀಡಿದೆ. ಹೆಚ್ಚಾಗಿ ಸೂತ್ರಗಳನ್ನು ಕವಿತೆಯೆಂದು ಭಾವಿಸಿ ಮಂಜುನಾಥರಂತೆ ಭಾಷಾಂತರಿಸದೆ, ಮೂಲಕ್ಕೆ ಹತ್ತಿರವಾಗಿರುವಂತೆ ಅವುಗಳನ್ನು ಕನ್ನಡಕ್ಕೆ ತರಬೇಕೆಂದುಕೊಂಡೆ ಎನ್ನುವ ಅವರು, ಚೀನೀ ಭಾಷೆ ಗೊತ್ತಿಲ್ಲದ್ದರಿಂದ, ಲಿನ್ಯುಟಾಂಗ್‌ನ ಇಂಗ್ಲಿಷ್ ಭಾಷಾಂತರ    (The Wisdom of Lao Tse  -  1948    ), ಮಿಚಿಲ್‍ನ ಇಂಗ್ಲಿಷ್ ಭಾಷಾಂತರ(Tao Te Ching -  1988)ಗಳ ಆಧಾರದಿಂದ ಲಾವ್‍ತ್ಸುನ ಸೂತ್ರಗಳನ್ನು ಭಾಷಾಂತರಿಸಿದ್ದಾರೆ. ಇಂಗ್ಲಿಷಿನ ಮೂಲಕ ಭಾಷಾಂತರಿಸಿದ ಚೀನೀ ಸೂತ್ರಗಳು ಮೂಲಕ್ಕೆ ಎಷ್ಟು ಹತ್ತಿರವಾಗಿವೆ ಎಂದು ವಿಮರ್ಶಿಸಬಲ್ಲ ವಿದ್ವಾಂಸರು ನಮ್ಮಲ್ಲಿಲ್ಲ. ಮೂಲದಲ್ಲಿ ಪ್ರಾಯಶಃ ಬೆಡಗಿನ ವಚನಗಳಂತಿರುವ ಸೂತ್ರಗಳ ಆಶಯ ಸ್ಪಷ್ಟವಾಗುವಂತೆ ಭಾಷಾಂತರಿಸುವುದರಲ್ಲಿ ಅನಂತಮೂರ್ತಿ ಯಶಸ್ವಿಯಾಗಿದ್ದಾರೆ. 'ಕವಿರಾಜಮಾರ್ಗ' ಶ್ರೀವಿಜಯ 'ಕಲ್ಪನೋಕ್ತಿ ಕಷ್ಟ' ಎಂಬ ಕಾವ್ಯದೋಷವನ್ನು ಹೆಸರಿಸುತ್ತಾನೆ. ಕವಿಯ ಆಶಯವೇನೆಂದು ಕಲ್ಪನೆಮಾಡಿಕೊಳ್ಳಲು ಕಷ್ಟವಾಗುವುದು, ಕಲ್ಪನೆ ಕಷ್ಟ'. ಅನಂತಮೂರ್ತಿಯವರ ಭಾಷಾಂತರ ಕಲ್ಪನೋಕ್ತಿಯ ಸೊಗಸಿನಿಂದ ತುಂಬಿದೆ. ದಾವ್‍ದ ಜಿಂಗ್' ಒಂದು ಸೂತ್ರ ಇಲ್ಲಿದೆ -

ಪುರಾತನ ಸೂರಿಗಳು ಗಾಢವಾದ ಜ್ಞಾನಿಗಳು
ಸೂಜಿಮನೆ ಸೂಕ್ಷ್ಮದ ಮತಿಯವರು
ಅವರ ಅರಿವಿನ ನಿಗೂಢಕ್ಕೆ ವ್ಯಾಖ್ಯಾನ ಬರೆದವರಿಲ್ಲ
ಅವರ ವಿವೇಕ ಆಳ ಅಳೆದವರೆ ಇಲ್ಲ
ನಾವು ವರ್ಣಿಸಬಹುದಾದ್ದು
ಅವರದ್ದೇ ಎಂದು ಕಾಣಲುಸಿಗುವ ಅವರ ಚರ್ಯೆ
ಮತ್ತು ಅವರ ವರ್ತನೆ
ಶೀತಕ್ಕೆ ಹೆಪ್ಪುಗಟ್ಟಿದ ನೀರಿನ ಮೇಲೆ ಆಯ ತಪ್ಪದಂತೆ
ನಡೆಯುವವರು ಹೇಗೋ, ಹಾಗೆ ಅವರು ಬಲು ಹುಷಾರು
ವೈರಿ ವಲಯದಲ್ಲಿ ಚಲನವಲನ ಮಾಡಬೇಕಾಗಿ ಬಂದ ಯೋಧರಂತೆ
ಅವರು ಬಲು ಚುರುಕು;
ಅತಿಥಿಗಳಂತೆ ಅವರು ದಾಕ್ಷಿಣ್ಯಶಾಲಿಗಳು;
ಕರಗಿಬಿಡುವ ಮಂಜುಗೆಡ್ಡೆಯಂತೆ
ಸುಲಭರು;
ಮರದ ದಿಮ್ಮಿಯಂತೆ ಕೊಟ್ಟ ರೂಪ ಪಡೆಯಬಲ್ಲವರು;
ಕಣಿವೆಯಂತೆ ಅವರ ಸ್ವೀಕಾರ,
ಯಾರು ರಾಡಿಯೂ ಆಗಿದ್ದು, ಕೆಸರು ಕಂತಿ
                 ತಿಳಿಯೂ ಆಗುವ ವ್ಯವಧಾನ ಉಳ್ಳವರೋ,
ಯಾರು ಜಡವೆನ್ನಿಸುವಂತೆ ತಟಸ್ಥ ಇದ್ದೂ
                ನಿಧಾನ ಮೈಮುರಿದೆದ್ದು ಚುರುಕಾಗಿಬಿಡುವರೊ,
ಪಥ ಹಿಡಿದ ಅಂಥ ಸೂರಿಗಳನ್ನು ಪೂರ್ಣತೆಯ ಗೀಳು ಹಿಡಿಯದು
-
ಎಂದೇ ಅವರು ಬಳಲಿ ಬಾಡುವುದು,
ಹೊಸಬರೂ ಆಗುವುದು.
                                                                 (ಸೂತ್ರ - 15)
'ಆವಾಹನೆ'

ಅನಂತಮೂರ್ತಿಯವರು ಬರೆದಿರುವ ನಾಟಕ 'ಆವಾಹನೆ' 1968ರಲ್ಲಿ ಪ್ರಕಟವಾಯಿತು. ಮೈಸೂರಿನಲ್ಲಿ ಬಿ.ವಿ. ಸತ್ಯನಾರಾಯಣ ರಾವ್ ಅವರ ನಿರ್ದೇಶದಲ್ಲಿ ಜೂನ್ 7, 1969ರಂದು ನಾಟಕ ಪ್ರದರ್ಶನಗೊಂಡಿತು. ಪ್ರದರ್ಶನದಲ್ಲಿ ಅನಂತಮೂರ್ತಿ (ಸಣ್ಣಪ್ಪಯ್ಯನ ಪಾತ್ರ) ಹಾಗೂ ಎಸ್ತರ್ ಅನಂತಮೂರ್ತಿ(ಸರೋಜನ ಪಾತ್ರ) ಆಭಿನಯಿಸಿದ್ದರು.. ಆರ್. ಅನಂತಮೂರ್ತಿಯವರ 'ಆವಾಹನೆ' ನವ್ಯ ಪರಂಪರೆಯ ಒಂದು ವಿಶಿಷ್ಟ ಕೃತಿ ಎಂದು ಡಾ| ಕೆ. ಮರುಳಸಿದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ - ಅಸ್ತಿತ್ವವಾದದ ನೆರಳಿನಲ್ಲಿಯೇ ನಮ್ಮ ಪರಂಪರಾಗತ ಮೌಲ್ಯಗಳನ್ನು ಮತ್ತು ಸಮಕಾಲೀನ ಬದುಕನ್ನು ನಾಟಕ ವಿಮರ್ಶಿಸುತ್ತಿದೆ. ಮನುಷ್ಯನ ಸ್ವಾತಂತ್ರ್ಯ ಅವನ ಆಯ್ಕೆಯಲ್ಲಿದೆ; ದೃಢ ನಿಶ್ಚಯದಿಂದ ಸತ್ಯವನ್ನು ಒಪ್ಪಿಕೊಂಡು ಕ್ರಿಯೆಯ ಮೂಲಕವೇ ಬದುಕನ್ನು ಅರ್ಥಪೂರ್ಣಗೊಳಿಸುವುದರಲ್ಲಿದೆ, ಎಂದು ನಂಬಿರುವ ನಾಟಕದ ನಾಯಕ ಶ್ರೀನಿವಾಸನ ದುರಂತ, ಅವನ ಮಾತು ಮತ್ತು ಕ್ರಿಯೆ ನಡುವೆ ಹೊಂದಾಣಿಕೆಯಿಲ್ಲದಿರುವುದು - ಭೂತಕಾಲದಿಂದ ಬಿಡಿಸಿಕೊಂಡು ತನ್ನ ತನ್ನ ನಿಜಸ್ವರೂಪವನ್ನು ಹೊರಗೆಡಹಿ, ತಾನು ವಾಸಿಸುತ್ತಿರುವ ವಠಾರದಿಂದ ಮುಕ್ತಿಪಡೆಯಬೇಕೆಂಬ ಅವನ ನಿಶ್ಚಯ ಕಾರ್ಯಗತವಾಗುವುದಿಲ್ಲ. ಭೂತಕಾಲದ ಘಟನೆಗಳಿಗೆ ಬದ್ಧನಾಗಿ ಅದರಿಂದ ಬಿಡಿಸಿಕೊಳ್ಳಲಾರದೆ, ತನ್ನ ನಿಜ ಸ್ವರೂಪವನ್ನು ಬಯಲಿಗಿಡಬೇಕೆಂದರೂ ಸಾಧ್ಯವಾಗದೆ, ಪಾಪಪ್ರಜ್ಞೆಯಿಂದ ಗುಪ್ತ ಅಪರಾಧಿಯಂತೆ ತೊಳಲುವ ಶ್ರೀನಿವಾಸನ ಹೋರಾಟ ಪ್ರಾತಿನಿಧಿಕವಾಗಿದೆ...... ಸಂವೇದನೆಯನ್ನು ಕಳೆದುಕೊಂಡ ಪರಿಸರದೊಂದಿಗೆ ವ್ಯಕ್ತಿ ನಡೆಸುವ ಹೋರಾಟವೇ ಇಲ್ಲಿ ಮುಖ್ಯವೇ ಹೊರತು ಆತನ ಸೋಲು ಅಥವಾ ಗೆಲುವಲ್ಲ. ಅಸಹ್ಯಕರ ಪರಿಸರದೊಂದಿಗೆ ಹೊಂದಿಕೊಳ್ಳಲಾರದ, ಅದರ ನೆನಪನ್ನು ಅಳಿಸಿಹಾಕಿ ಸ್ವತಂತ್ರನೂ ಆಗಲಾರದ ಶ್ರೀನಿವಾಸನ ಹೊಯ್ಡಾಟವನ್ನು ನಾಟಕಕಾರರು ಅತ್ಯಂತ ಯಶಸ್ವಿಯಾಗಿ ಮಂಡಿಸಿದ್ದಾರೆ. ಅವನ ಮಾತುಗಾರಿಕೆಯೇ ಅವನ ದೊಡ್ಡ ದುರಂತವಾಗಿದ್ದು ಅದನ್ನು ಸಂಭಾಷಣೆಯಲ್ಲಿ ಮಾರ್ಮಿಕವಾಗಿ ಕಾಣಿಸಲಾಗಿದೆ. ಗಣೇಶನ ಚೌತಿಯ ಹಿನ್ನೆಲೆಯಲ್ಲಿ ಪ್ರಾರಂಭವಾಗುವ ನಾಟಕದಲ್ಲಿ ಗಣಪತಿ, ಮಾತನಾಡದ ಒಂದು ಪಾತ್ರವಾಗಿ ನಾಟಕದ ಕ್ರಿಯೆಯಲ್ಲಿ ಪಾಲುಗೊಳ್ಳುತ್ತಾನೆ. ತಾಯಿ, ಹೆಂಡತಿ, ಸ್ನೇಹಿತ ಎಲ್ಲರನ್ನೂ ಒಬ್ಬೊಬ್ಬರಾಗಿ ತ್ಯಜಿಸಿ, ಎಲ್ಲ ಬಂಧನಗಳನ್ನೂ ಕಳಚಿ, ಮುಕ್ತನಾಗಬೇಕೆಂದುಕೊಂಡಿದ್ದ ಶ್ರೀನಿವಾಸನಿಗೆ ಬಾಲ್ಯದಲ್ಲೇ ಬಿಟ್ಟುಹೋಗಿದ್ದ ತಂದೆಯೂ ಬಂದು ಸೇರಿಕೊಳ್ಳುವುದು ನಾಟಕೀಯ ವ್ಯಂಗ್ಯವಾಗಿದೆ. ಗಟ್ಟಿಯಾದ ಸಂವಿಧಾನ, ಪಾತ್ರಪೋಷಣೆ, ಸಂಭಾಷಣೆ ಮತ್ತು ವೈಚಾರಿಕತೆಯ ಮೂಲಕವೇ ಆಧುನಿಕ ಸಂವೇದನೆಗಳನ್ನು ಮಂಡಿಸುವ ನಾಟಕ ನಮ್ಮ ನವ್ಯ ನಾಟಕಗಳಲ್ಲಿ ಪ್ರತ್ಯೇಕ ಮನ್ನಣೆಗೆ ಅರ್ಹವಾಗಿದೆ.

ಯು. ಆರ್. ಅನಂತಮೂರ್ತಿ (2000)
(
ಸಂ) ಮುರಳೀಧರ ಉಪಾಧ್ಯ ಹಿರಿಯಡಕ

No comments:

Post a Comment