stat Counter



Tuesday, January 11, 2011

The Kaikini melody


ಕಾಯ್ಕಿಣಿ ಮಾಧುರ್ಯ

ಮುರಳೀಧರ ಉಪಾಧ್ಯ ಹಿರಿಯಡಕ

ಚರ್ವಿತ ಚರ್ವಣವಾಗಿದ್ದ ಕನ್ನಡ ಚಿತ್ರಗೀತೆ ಕ್ಷೇತ್ರದಲ್ಲಿ ಸೃಜನಶೀಲತೆಯ ಹೊಸ ಕಾಮನಬಿಲ್ಲು, ಕರಾವಳಿಯ ಗೋಕರ್ಣದಿಂದ ಕಾಣಿಸುತ್ತಿದೆ. ಪ್ರವಾಹ ವಿರುದ್ಧ ಈಜಿ ದಾಖಲೆ ನಿರ್ಮಿಸುವುದರಲ್ಲಿ, ಜಯಂತ್ ಕಾಯ್ಕಿಣಿ ಯಶಸ್ವಿಯಾಗಿದ್ದಾರೆ. ಬಿ. ವಿ. ಕಾರಂತರು ಕನ್ನಡದ ರಂಗಗೀತೆಗಳಿಗೆ ಹೊಸದಿಕ್ಕು ತೋರಿದಂತೆ ಕಾಯ್ಕಿಣಿಯವರು ಕನ್ನಡ ಚಿತ್ರಗೀತೆಗಳಿಗೆ ಹೊಸ ಆಯಾಮ ನೀಡಿದ್ದಾರೆ.

’ಆಕಾಶ ನೀನೆ ನೀಡೊಂದು ಗೂಡು, ಬಂತೀಗ ಪ್ರೀತಿ ಹಾರಿ " ಎಂದು ಆರಂಭವಾಗುವ ಹಾಡಿನಲ್ಲಿ ಪ್ರೀತಿಯ ಅಂಬಾರಿ, ಮುಂದುವರಿಯುವ ಕಾದಂಬರಿಯಾಗಿದೆ. ಪ್ರೀತಿ ಆಕಾಶದಲ್ಲಿ ಗೂಡು ಕಟ್ಟುವ ಕನಸು ಕಾಣುತ್ತಿದೆ.
 ’ಎಲ್ಲೋ ಮಳೆಯಾಗಿದೆಯೆಂದು ತಂಗಾಳಿಯು ಹೇಳುತದೆ" ಎಂಬ ಹಾಡಿನಲ್ಲಿ ’ನಿನ್ನ ನೋಡಿದ ಮೇಲೆಯು ಪ್ರೀತಿಯಲಿ ಬೀಳದೆ ಇರಬಹುದೆ" ಎಂಬ ಸಾಲು ಅವಿಸ್ಮರಣೀಯ. ’ಕಣ್ಣಲ್ಲಿ ಮೂಡಿದೆ ಹನಿಗವನ ಕಾಯಿಸಿ ನೀ ಕಾಡಿದರೆ" ಎಂಬ ಸಾಲು ಧ್ವನಿಪೂರ್ಣ, ವಿಪ್ರಲಂಬದ ’ಪೂರ್ವರಾಗ" ಈ ಹಾಡಿನಲ್ಲಿದೆ.
 ’ಅದೇ ಭೂಮಿ, ಅದೇ ಹಾಡು ಈ ನಯನ ನೂತನ" ಎಂಬ ಹಾಡಿನಲ್ಲಿರುವ ಒಂದು ಸಾಲು ಜಯಂತ್ ಕಾಯ್ಕಿಣಿಯವರ ಎಲ್ಲ ಚಿತ್ರಗೀತೆಗಳಿಗೆ ಯೋಗ್ಯವಾದ ಶೀರ್ಷಿಕೆಯಂತಿದೆ - ’ಅದೇ ದಾರಿ, ಅದೇ ತಿರುವು ಈ ಪಯಣ ನೂತನ" ಕೇಳಿದ ಕೂಡಲೆ ಮನಸ್ಸನ್ನು ಆಹ್ಲಾದಗೊಳಿಸುವ ಕಾವ್ಯದ ಒಂದು ಗುಣ ಮಾಧುರ್ಯ, ಇದು ಕಾಯ್ಕಿಣಿ ಹಾಡುಗಳ ಜೀವಾಳ.

’ಈ ಸಂಜೆ ಯಾಕಾಗಿದೆ, ಈ ಸಂತೆ ಸಾಕಾಗಿದ" ಎಂಬ ಹಾಡಿನಲ್ಲಿ ವಿರಹದ ಆರೋಹಣದ ಸೊಗಸಾದ ಚಿತ್ರಣವಿದೆ. ವಿರಹಿಯ ಮೌನ ಬಿಸಿಯಾಗಿದೆ. ತಾರಾಗಣ ಅವನ ನೋವಿಗೆ ಕಿಡಿ ಸೋಕಿಸಿ ಮಜನೋಡಿದೆ. ತಂಗಾಳಿಯ ಪಿಸುಮಾತಿಗೆ ಅವನ ಕ್ಷಣ ಯುಗವಾಗಿದೆ. ’ನೀನಿಲ್ಲದೇ ಆ ಚಂದಿರ ಈ ಕಣ್ಣಲಿ ಕಸವಾಗಿದೆ. ಅದನೂದುವ ಉಸಿರಲ್ಲದೇ ಬೆಳದಿಂಗಳು ಅಸುನೀಗಿದೆ’ ಎಂಬ ಸಾಲುಗಳು ಬೇಂದ್ರೆಯವರ "ಹುಣ್ಣಿಮೆ ಚಂದಿರನ ಹೆಣಾ ಬಂತೋ ಮುಗಿಲಾಗ ತೇಲುತ ಹಗಲ’ ಎಂಬ ಸಾಲಿನಷ್ಟೇ ಸೊಗಸಾಗಿದೆ.
 ’ಲಹರಿ ಮೋಹ ಲಹರಿ, ನನ್ನ ಮನವ ಸವರಿ" ಎಂದು ಆರಂಭವಾಗುವ ಸಾಲಿನಲ್ಲಿ ’ಮೌನ ಮುರಿದಾಗಿದೆ, ಮಾತು ಬರಿದಾಗಿದೆ, ಹೇಳು ಬರಲೇನು ನಿನ್ನೊಂದಿಗೆ" ಎಂಬುದು ರಸಿಕರು ಗುಣುಗುಣಿಸುವ ಸಾಲು. ವಿಪ್ರಲಂಬದ ಪೂರ್ವರಾಗದಲ್ಲಿರುವ ಇಲ್ಲಿನ ನಾಯಕನಿಗೆ ಅವನ ಗೆಳತಿಯ ಕಿರುನಗೆಯ ಸಣ್ಣ ದೀಪಗಳೇ ದಾರಿತೋರುತ್ತಿವೆ. ’ನೋವು ನಲಿವುಗಳ ಲೆಕ್ಕಮೀರುವುದೆ ಜೀವದೊಲುಮೆಯ ಸಂಕೇತ' ಎಂಬ ಸಾಲು ಕಾಯ್ಕಿಣಿಯವರ ದಾಂಪತ್ಯ ವ್ಯಾಖ್ಯಾನವಾಗಿದೆ.

ಎಂಥಹ ಕ್ಷೋಭೆಯ ಪರಿಸ್ಥಿತಿ ಸಂಭವಿಸಿದರೂ ಉದ್ವೇಗವಿಲ್ಲದಿರುವುದು ಮಾಧುರ್ಯ ಗುಣ. ಇದು ಜಯಂತ್ ಕಾಯ್ಕಿಣಿ ಗುಣವೂ ಹೌದು. ತೆಲುಗಿನ ಗೋರಟಿ ವೆಂಕಣ್ಣನವರಂತೆ ಕನ್ನಡದ ಹಾಡುವ ಹಕ್ಕಿಯಾಗಿರುವ, ಜನಪ್ರಿಯತೆಯ ಆರೋಹಣದಲ್ಲಿರುವ ಮಿತ್ರ ಜಯಂತ್ ಕಾಯ್ಕಿಣಿಯವರಿಗೆ ಅಭಿನಂದನೆಗಳು.

mupadhyahiri.blogspot.com
E-mail: mhupadhya@gmail.com

No comments:

Post a Comment