stat Counter



Wednesday, December 3, 2014

ಮೋಹನ್ . ವಿ. ಕೊಳ್ಳೇಗಾಲ - ಹನಿಗವನಗಳು

ಕಂಡ ಕಂಡ ವಸ್ತುಗಳ ಮೇಲೆ ಕವಿತೆ
1.
ಚುಚ್ಚುವ ಸೂಜಿಯ ಹಿಂದೆ
ಹೊಲೆಯುವ ದಾರ
2.
ಧ್ಯಾನಕ್ಕೆ ಕುಳಿತಿದೆ
ಖಾಲಿ ಬಿಂದಿಗೆ
ಕೈಯಿಟ್ಟರೇನೂ ಸಿಗದು
3.
ಈ ಬಚ್ಚಲು ಮನೆ ಶ್ರೇಷ್ಠ ಅಲ್ಲವೇ?
ಎಲ್ಲಾ ಅಲ್ಲೇ ಶುದ್ಧವಾಗುವುದು
4.
ದೇವರಮನೆಯ ಫ್ರೇಮಿನೊಳಗೆ
ದೇವರುಗಳು
ಹೊರ ಹೋಗದಿರಲು
ಬಾಗಿಲಿಗೆ ಘಂಟೆ
5.
ಅಸ್ತವ್ಯಸ್ತವಾಗಿ ಬಿದ್ದ ಹಾಸಿಗೆ
ಅದರ ಮೇಲೆ
ಗುಟ್ಟು ಹೊತ್ತ ಚಿಟ್ಟೆ
6.
ಈಗಷ್ಟೇ ಹಚ್ಚಿದ ದೀಪ
ಮನೆಯಲ್ಲಿ
ಹರಡಿದ್ದ ಕಸ
ತೋರಿಸಿತು (ಆದರೆ ಕಸ ಗುಡಿಸಿ ದೀಪ ಹಚ್ಚುವುದು ವಾಡಿಕೆ)
7.
ಇಲ್ಲಿದೆ ಬಗೆ ಬಗೆ ಕನ್ನಡಿ
ರೂಪದ ಮುನ್ನುಡಿ
ಕುರೂಪದ ಬೆನ್ನುಡಿ
8.
ಸುಮ್ಮನೆ ಮಲಗಿದೆ
ಐರನ್ ಬಾಕ್ಸ್
ಸುಟ್ಟರೂ
ಅದರದು
ತಿದ್ದುವ ಬುದ್ಧಿ
9.
ಮೂಲೆಯಲ್ಲಿ ಪೇಪರ್
ಮೇಲೆ ಕೊಳೆತ
ತರಕಾರಿ
ನಿನ್ನೆ ಎರಡಕ್ಕೂ
ಎಷ್ಟು ಬೆಲೆಯಿತ್ತು ಅಂತೀರಿ?
10.
ಅದು ಕಸ ಸುರಿಯುವ
ಜಾಗ
ಕಸ ಎತ್ತುವ ಜಾಗವೂ
11.
ಮೇಲೆ ಹೊದಿಸಿದ ಹೊದಿಕೆಯಲ್ಲಿ
ಬಣ್ಣದ ಚಿಟ್ಟೆ
ಒಳಗೆ ಸುಕ್ಕು ಹಾಸಿಗೆ
12.
ಒಲೆಯ ಮೇಲೆ ಬೆಂದ
ಹಿರಿಯರು
ಜೊತೆಗೆ ಮುಂದಿನ
ತಲೆಮಾರು
13.
ಗಂಡ ತಂದ ಪಾತ್ರೆಗಳಿಗೆ
ಒಗ್ಗಿಕೊಂಡ
ಹೆಂಡತಿ ಸುರಿದ ನೀರು
14.
ಮುಚ್ಚಿದ ಆ ಬಾಗಿಲು
ತೆರೆದುಕೊಳ್ಳದಿರಲು
ನಾನೇ ಜಡಿದ ಚಿಲಕ
15.
ಮನೆಯನ್ನು ಸ್ವಚ್ಚಗೊಳಿಸುತ್ತಲೇ
ಮೂಲೆ ಸೇರಿಕೊಂಡ
ಕಸಪೊರಕೆ
ಹೆಮ್ಮೆಯಿಂದ ನಿಂತಿದೆ
16.
ಆ ಬಾಟಲಿನೊಳಗೆ ಪುಣ್ಯ ತೀರ್ಥ
ಒಳಗೆ ಸಿಲುಕಿಕೊಂಡ ದೇವರು
17.
ಮೂಲೆಯಲ್ಲಿ ಯಾರಿಗೂ ಕಾಣದೇ
ಮಲಗಿದ ಒಳಕಲ್ಲು
ಕಂಡದ್ದು ಕರೆಂಟು ಹೋದಾಗ
18.
ಟೇಬಲ್ಲಿನ ಮೇಲೆ ಬುಡಕಿತ್ತ
ಕೂದಲುಗಳು
ಅಡ್ಡಬಿದ್ದು ಕ್ಷಮೆ
ಕೋರಿದ ಬಾಚಣಿಗೆ
19.
ಗೋಣು ಮುರಿದು ಬಿದ್ದುಕೊಂಡ
ಬಿಯರ್ ಬಾಟಲ್ಗಳು
ಒಳಗೆ ಅವಡುಗಚ್ಚಿದ ಮೌನ
20.
ಕಾಂಪಾಸ್ಸಿಲ್ಲದೇ ಹುಯ್ದ
ದೋಸೆಗಳ ಮೇಲೆ
ಅಮ್ಮನ ಕೈಲೀಲೆ
21.
ಗೆದ್ದಲು ಕಟ್ಟಿದ ಮನೆಗೆ
ಹಾವು ನುಗ್ಗುತ್ತಿದೆ
22.
ಬೆಟ್ಟದ ಮೇಲೆ
ಹಸಿರ ಹೊದಿಕೆ
ಉಬ್ಬಿದೆದೆಯ
ತಬ್ಬಿದ ರವಿಕೆ
23.
ಹರಿಯುವ ನದಿಯ
ವೇಗದೊಂದಿಗೆ
ಸರಸವಾಡಿದ ಮರಗಳು
24.
ಆ ಹೊಂಡದ ನೀರಿನೊಳಗೆ
ಕಂಡ
ಮೋಡದ ಬಿಂಬ
25.
ಈ ವೃತ್ತದಲ್ಲಿ ನಾಲ್ಕು ರಸ್ತೆಗಳು
ಯಾವೆಡೆಗೆ ಕಾಲಿಟ್ಟರೂ
ಮತ್ತಷ್ಟು ಕವಲುಗಳು
26.
ಈ ಜನಜಂಗುಳಿಯಲ್ಲಿ ನೆಗೆಯುವ
ವಾಹನಗಳು
ಮೇಲೆ ಒಂಟಿ ಜೀವಗಳು
27.
ತನಗಿಂತಲೂ ತೂಕದ ವಸ್ತು
ಹೊತ್ತ ಇರುವೆ
ಗುರುತ್ವಕ್ಕೆ ತಳ ತಿರುಗಿಸಿ
ಮರ ಹತ್ತಿದೆ
28.
ಮರದ ಕೆಳಗೆ ಕುಳಿತ
ಪ್ರೇಮಿಗಳಿಗೆ
ನಿರ್ಬಂಧ
ಮೇಲೆ ಕಟ್ಟಿದ ಜೇನ
ಕಂಡು ಎಲ್ಲರಿಗಾನಂದ
29.
ಮಧ್ಯಾಹ್ನಕ್ಕೆ ಕೈ ಸೇರಿದ
'ಈ ಸಂಜೆ' ಪೇಪರ್
 { From Mohan. V. Kollegal's Face book }

No comments:

Post a Comment