stat Counter



Wednesday, April 1, 2015

ಯಮುನಾ Gaonkar - ಕಾಡುವ ಅಬ್ಬೆ ಮಡಿಲು

ಕಾಡುವ ಅಬ್ಬೆ ಮಡಿಲು
ಗೊಂಡಾರಣ್ಯದ ಒಂಟಿ ಮನೆ
ಬೆಳಗಿದ ಖಂಡಕಾವ್ಯ ನನ್ನಬ್ಬೆ
ಸೋರುಮಾಡಿನಡಿಯ ಮಾನಧನ ಸಂಪನ್ನೆ 
ಬಿದಿರ ಕಂಬಿ ತಟ್ಟಿಗೋಡೆಯೊಳಗಿನ
ಭವಿಷ್ಯ ಮುಖಿ
ಶೀಗೆ ರೀಟೆ ಪುಡಿಯಲ್ಲಿ ಶುಭ್ರಮಾಡಿದ
ಕಂಬಿ ಸೀರೆ ನೆರಿಗೆಗಳ ಗುಚ್ಛ
ಬಿಸಿಲ ಪರಿಮಳದ ಅವಳ ಮಡಿಲು
ನೆನಪಿನಲ್ಲೂ ನೆಮ್ಮದಿ
ಹಗರಿನ ದಬ್ಬೆಗೆ ಡಬ್ಬಿ ಜೋಲಿಸಿ
ಶ್ರವಣ ಕುಮಾರನ ತಂದೆ ತಾಯಂತೆ
ನೀರು ಹೊತ್ತು ನನ್ನ ಹೆತ್ತ ಅಬ್ಬೆ
ಶೇಡಿಮಣ್ಣ ಗೋಡೆಗೆ ಬಡಿದು
ಕೆಮ್ಮಣ್ಣ ಪಟ್ಟಿ ಗೆರೆಯ ಎಳೆದು
ಗದ್ದೆ ಮಣ್ಣಿನ ಬಣ್ಣವ ಕೊಟ್ಟು ಚಿತ್ರಿಸಿದವಳೀಕೆ. ..ನಮ್ಮನ್ನ
ತಗ್ಗಿದ ಗೋಣು ಬಗ್ಗಿದ ಬೆನ್ನು
ನೆಟ್ಟಿಹಾಕಿ ಕಳೆಕಿತ್ತ ಪೈರು ಫಸಲು ನನ್ನಬ್ಬೆ
ಸಾಲುಸಾಲು ಗಿಡನೆಟ್ಟು ನೀರೆರೆದ ಜೀವ
ವಿಹ್ವಲಗೊಂಡಿದ್ದು
ಬದುಕ ಭಯಂಕರ ಆಕಸ್ಮಿಕಕ್ಕೆ
ಇಂದು ರುಚಿಯಾದ ಅಡುಗೆ ಸವಿವಾಗ
ರೊಟ್ಟಿ ತಟ್ಟಿ ತಣ್ಣನ್ನ ತಿಂದ ಅಬ್ಬೆ
ಹೇಳುವ 'ಕಣ್ಣೀರ ಸಾರು ಸೋರ್ ಪಳ್ದಿ'
-ಯದೇ ನೆನಪು
ಕಾಲು ಒಡೆತ ಮಂಡಿ ಸೆಳೆತ
ಕೈತಳ ಬಿರಿದ ಅಡಿಕೆ ಚೊಗರು
ಸಗಣಿ ಉಚ್ಚೆ ಬರಗಿ
ಅಕ್ಕಚ್ಚು ಮುರುಗು ದನದೆದುರಿಟ್ಟು
ಕವಳ ತಿನ್ನುತ್ತ ಅಂತರ್ಮುಖಿಯಾದವಳು..
ತಾನು ಕಾವ್ಯಿಸಿದ ಒಡಲಕುಡಿಗಳ ದಿಟ್ಟಿಸಿ...
ಅಪ್ಪಟ ಆಶುಕವಿಯ
ಕೊನೆಯ ಗಾಂವ್ಟಿ ಕವನ ನಾನು
ಚಾಳೀಸ್ ಬಂದ ನನಗೂ
ಅಬ್ಬೆ ಮಡಿಲ ಕಂಡರೆ ತಬ್ಬಿ ತಲೆಯಿಡುವಾಸೆ...
ಅವಳ ಸಂಭ್ರಮ ಸೆರೆಹಿಡಿವ ಪದಗಳೇ
ಜಾಳು ಜಾಳು...
- ಯಮುನಾ (ಕಳೆದ ಹತ್ತಾರು ವರ್ಷಗಳಿಂದ ಆಗಾಗ ತೆಗೆದ ಫೋಟೋ ಬಳಸಿದ್ದು)

No comments:

Post a Comment